
ಸುದ್ದಿ ಬೆಳಕು ವಾರ್ತೆ
ಸುರಪುರ ಏಪ್ರಿಲ್ 18 : ತಾಲೂಕಿನ ಶಾಂತಪೂರ ಕ್ರಾಸ್ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ-150 ಅಗಲೀಕರಣ ಹಾಗೂ ರಸ್ತೆ ಕಾಮಗಾರಿ ತಕ್ಷಣ ಆರಂಭಿಸುವಂತೆ ಆಗ್ರಹಿಸಿ ಇಂದು ಭಾನುವಾರ ಬೆಳಗ್ಗೆ 9 ಗಂಟೆಯಿಂದ ರಸ್ತೆ ತಡೆ (ರಾಸ್ತಾ ರೋಖೋ) ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಂಥಣಿ, ಬಂಡೋಳಿ, ಶಾಂತಪೂರ, ಹುಣಸಿಹೊಳೆ, ಲಿಂಗದಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ತಿಳಿಸಿದ್ದಾರೆ.
ಈ ಕುರಿತು ಶನಿವಾರ ತಹಸೀಲ್ದಾರ್ ಹಾಗೂ ಪೊಲೀಸ್ ಇನ್ಸಪೆಕ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಮುಖಂಡರು, ಈ ಹೆದ್ದಾರಿಯಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಅಪಘಾತಗಳು ಜನರಲ್ಲಿ ಭೀತಿ ಮೂಡಿಸುತ್ತಿವೆ ಎಂದು ಆರೋಪಿಸಿದರು.
ಇತ್ತೀಚೆಗೆ ಶಾಂತಪೂರ ಕ್ರಾಸ್ ಹತ್ತಿರ ನಡೆದ ಭೀಕರ ಅಪಘಾತದಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿ ಒಂದೇ ಕುಟುಂಬದ 9 ಮಂದಿ ಸಜೀವ ದಹನವಾಗಿರುವುದು ಜನಮನವನ್ನು ನಡುಗಿಸಿದೆ ಎಂದು ಹೇಳಿದರು.
ಅದೇ ರೀತಿ, ಜನವರಿ ತಿಂಗಳಲ್ಲಿ ತಿಂಥಣಿ ಮಾರ್ಗದ ಕಮಾನ್ ಹತ್ತಿರ ಐದು ಮಂದಿ ಮೃತಪಟ್ಟ ಘಟನೆ ಹಾಗೂ ಇತ್ತೀಚೆಗೆ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿರುವುದು ಈ ರಸ್ತೆಯ ಅಪಾಯದ ತೀವ್ರತೆಯನ್ನು ತೋರಿಸುತ್ತದೆ ಎಂದು ವಿವರಿಸಿದರು.
ಇಕ್ಕಟ್ಟಾದ ರಸ್ತೆ – ಅಪಘಾತಗಳ ಮೂಲ ಕಾರಣ
ಈ ಹೆದ್ದಾರಿ ಇಕ್ಕಟ್ಟಾಗಿರುವುದರಿಂದಲೇ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರು ಈ ಮಾರ್ಗದಲ್ಲಿ ಸಂಚರಿಸಲು ಭಯಪಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ಎಚ್ಚರಿಕೆ
ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಪಂದಿಸಿ ಸ್ಪಷ್ಟ ಭರವಸೆ ನೀಡುವವರೆಗೆ ಹೋರಾಟವನ್ನು ಕೈ ಬಿಡುವುದಿಲ್ಲ ಎಂದು ಹೋರಾಟಗಾರರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗಂಗಾಧರ ನಾಯಕ (ತಿಂಥಣಿ), ಅಯ್ಯಣ್ಣ ಹಾಲಭಾವಿ, ರತ್ನರಾಜ ಶಾಲಿಮನಿ, ಶರಣು ಮಕಾಶಿ (ಲಿಂಗದಳ್ಳಿ), ಮಲ್ಲಿಕಾರ್ಜುನ ಬೇವಿನಾಳ, ದೇವಿಂದ್ರಪ್ಪ ಮೇಟಿಗೌಡ್ರು, ಸಂಜೀವಪ್ಪ ನಾಯಕ, ಸಚಿನ್ ಕುಮಾರ್ ನಾಯಕ, ದೇವರಾಜ್ ಗಿರಣಿ, ಬೈರಣ್ಣ ಅಂಬಿಗೇರ, ಮರಿಲಿಂಗಪ್ಪ ಗುಡಿಮನಿ (ಹುಣಸಿಹೊಳೆ), ಸೋಪಣ್ಣ ಹಾಲಭಾವಿ (ಶಾಂತಪೂರ), ಗುರುಬಸವ (ಬಂಡೋಳಿ) ಸೇರಿದಂತೆ ಹಲವರು ಉಪಸ್ಥಿತರಿದ್ದರು.










Leave a Reply