
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ್ ಮಿಷನ್ ಗ್ರಾಮೀಣ ಯೋಜನೆಯಡಿ ಗ್ರಾಮೀಣ ಜನರಿಗೆ ಅಕುಶಲ ಕೆಲಸವನ್ನು ಒದಗಿಸಲು ಆಗಸ್ಟ್ 15ರಿಂದ ಸೆಪ್ಟೆಂಬರ್ 15 ರವರೆಗೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಜಾಬ್ ಕಾರ್ಡ್ ಮೇಳವನ್ನು ಹಮ್ಮಿಕೊಳ್ಳುತ್ತಿದ್ದು, ಜಾಬ್ ಕಾರ್ಡ್ ಇಲ್ಲದ ಅರ್ಹ ಫಲಾನುಭವಿಗಳು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಹಾಪುರ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಬಸವರಾಜ ಶರಭೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬರ ಪರಿಸ್ಥಿತಿಯಿಂದ ಗ್ರಾಮೀಣ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದ ಕೃಷಿ ಚಟುವಟಿಕೆ ನಡೆಯದೆ ಸ್ಥಳೀಯವಾಗಿ ಉದ್ಯೋಗಾವಕಾಶ ಕಡಿಮೆಯಾಗಿ ಜನರ ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ವಿಬಿ-ಜಿರಾಮ್ಜಿ ಯೋಜನೆಯಡಿ ಸ್ವ-ಗ್ರಾಮದಲ್ಲೆ ಉದ್ಯೋಗ ಅವಕಾಶ ಕಲ್ಪಿಸುವ ಮೂಲಕ ಕೆಲಸಕ್ಕಾಗಿ ನಗರ ಪ್ರದೇಶಗಳತ್ತ ವಲಸೆ ಹೊಗುವುದನ್ನು ತಡೆಯಬಹುದಾಗಿದೆ ಎಂದಿದ್ದಾರೆ.
ಕೂಲಿಕಾರರಿಗೆ ಸ್ಥಳೀಯವಾಗಿ ಕೆಲಸ ನೀಡಲು ಜುಲೈ 1ರಿಂದ ಜಾರಿಗೆ ಬಂದ ಹೊಸ ವಿಬಿ-ಜಿರಾಮ್ಜಿ ಯೋಜನೆಯಡಿ ನೋಂದಾಯಿತ ಹಾಗೂ ಇ-ಕೆವೈಸಿ ಪೂರ್ಣಗೊಂಡ ಕೂಲಿಕಾರರಿಗೆ ಕೆಲಸ ಕೊಡಲಾಗುತ್ತಿದೆ. ಜುಲೈ ತಿಂಗಳ ಸಾಧನೆ ಆಶಾದಾಯಕವಾಗಿಲ್ಲ, ತಾಲೂಕಿನ 30801 ನೋಂದಾಯಿತ ಕೂಲಿಕಾರರಲ್ಲಿ 545 ಜನರು ಮಾತ್ರ ಸಕ್ರಿಯವಾಗಿ ಕೆಲಸ ಮಾಡಿದ್ದು ಕಂಡು ಬಂದಿದೆ. ಹೆಚ್ಚಿನ ಸಂಖ್ಯೆಯ ಕೂಲಿಕಾರರನ್ನು ಯೋಜನೆಯಡಿ ತೊಡಗಿಸಿಕೊಳ್ಳಲು, ಮನೆ ಭೇಟಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದಿದ್ದಾರೆ.
ಸಕ್ರಿಯ ಕುಟುಂಬಗಳ ಭಾಗವಹಿಸುವಿಕೆ ಹೆಚ್ಚಿಸಲು ಹಾಗೂ ಪ್ರತಿದಿನ ಕನಿಷ್ಟ 2500 ಮಾನವ ದಿನಗಳನ್ನು ಸೃಜಿಸುವ ಮೂಲಕ ತಿಂಗಳಲ್ಲಿ 75 ಸಾವಿರ ಮಾನವ ದಿನಗಳ ಸೃಜನೆ ಗುರಿ ಸಾಧಿಸಲು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಬ್ಕಾರ್ಡ್ ಮೇಳ ಅಭಿಯಾನವನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ನಿರ್ದೇಶನದಂತೆ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಭಿಯಾನದ ಪ್ರಮುಖ ಉದ್ದೇಶ: ಗ್ರಾಮೀಣ ಜನರ ಭಾಗವಹಿಸುವಿಕೆ ಹೆಚ್ಚಿಸಲು ಯೋಜನೆಯಡಿ ಲಭ್ಯವಿರುವ ಅಕುಶಲ ಕೆಲಸ ಹಾಗೂ ವೈಯಕ್ತಿಕ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಜೀವನೋಪಾಯ ಭದ್ರತೆಗೆ ಉದ್ಯೋಗ ಸೃಜನೆ ಮಾಡುವುದು. ಬರ ನಿರ್ವಹಣೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿ ಅನುಷ್ಟಾನಿಸಿ ಕೂಲಿಕಾರರ ವಲಸೆ ತಡೆಯುವುದಾಗಿದೆ ಎಂದು ವಿವರಿಸಿದ್ದಾರೆ.
ಅಭಿಯಾನದ ಚಟುವಟಿಕೆಗಳು: ಮನೆ ಮನೆಗೆ ಭೇಟಿ ನೀಡಿ, ಕೂಲಿ ಬೇಡಿಕೆ ಸ್ವೀಕರಿಸುವುದು. ಸ್ಥಳದಲ್ಲೆ ಪರಿಶೀಲನೆ, ಜಾಬ್ ಕಾರ್ಡ್ ವಿತರಣೆ, ಕೆಲಸದ ಸ್ವೀಕೃತಿ ರಶೀದಿ ವಿತರಣೆ, ದಿನದ ಗುರಿ, ಸಕ್ರಿಯ ಕುಟುಂಬಗಳ ಭಾಗವಹಿಸುವಿಕೆ ಹೆಚ್ಚಿಸಲು ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಜಾಬ್ ಕಾರ್ಡ್ ಮಹತ್ವ: ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೆ ಒಂದು ಜಾಬ್ ಕಾರ್ಡ್ ನೀಡಲಾಗುತ್ತಿದೆ. ಜಾಬ್ ಕಾರ್ಡ್ ಪಡೆದ ಕುಟುಂಬಕ್ಕೆ, ಕುಟುಂಬದ ಜೀವಿತಾವಧಿಯಲ್ಲಿ 5 ಲಕ್ಷ ರೂ.ಗಳ ಮಿತಿಯಲ್ಲಿ ನೀಡುವ ಆರ್ಥಿಕ ಸಹಾಯಧನದಲ್ಲಿ ಮೇಕೆ, ದನದ, ಹಂದಿ, ಕೋಳಿ ಶೆಡ್ ಹಾಗೂ ಕೃಷಿ ಹೊಂಡ, ಎರೆಹುಳು ಘಟಕ, ಇಂಗು ಗುಂಡಿ, ತೋಟಗಾರಿಕೆ, ರೇಷ್ಮೆ ಸೇರಿ ಇತರೆ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೇ, ಪ್ರತಿ ವರ್ಷ 125 ದಿನ ಅಕುಶಲ ಕೂಲಿ ಕೆಲಸ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.











Leave a Reply