ಶಹಾಪುರ : ಸಹಕಾರ ಸಂಘಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಬದ್ಧತೆ, ದಕ್ಷತೆ ಮತ್ತು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಲು ತರಬೇತಿ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದು ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ವಿಶ್ವನಾಥ ರೆಡ್ಡಿ ಎಸ್. ದರ್ಶನಾಪುರ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆ ವತಿಯಿಂದ ಶಹಾಪುರ ಮತ್ತು ವಡಗೇರ ತಾಲ್ಲೂಕು ವ್ಯಾಪ್ತಿಯ ನೌಕರರ ಸಹಕಾರ ಸಂಘಗಳು ಹಾಗೂ ವಿವಿಧೋದ್ದೇಶ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ ಸದಸ್ಯರು, ನಿರ್ದೇಶಕರು ಹಾಗೂ ಸಿಬ್ಬಂದಿಗೆ ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರ ನೀಡುವ ಮೂಲಕ ಜಿಲ್ಲಾ ಸಹಕಾರ ಒಕ್ಕೂಟವು ಮಾತೃ ಸಂಸ್ಥೆಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಹಕಾರ ಸಂಘಗಳ ಕಾರ್ಯವೈಖರಿಯನ್ನು ಮತ್ತಷ್ಟು ಸುಧಾರಿಸಲು ಇಂತಹ ತರಬೇತಿಗಳು ಸಹಕಾರಿಯಾಗಲಿವೆ ಎಂದರು.
ಎನ್.ಸಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಒಕ್ಕೂಟದ ಉಪಾಧ್ಯಕ್ಷ ಎಂ. ನಾರಾಯಣ ಸಹಕಾರ ಪಿತಾಮಹರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಒಕ್ಕೂಟದ ನಿರ್ದೇಶಕ ಕೆಂಚಪ್ಪ ನಗನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ತರಬೇತಿ ಕಾರ್ಯಕ್ರಮದಲ್ಲಿ ‘ಒತ್ತಡ ನಿರ್ವಹಣೆ’ ಕುರಿತು ರವೀಂದ್ರ ಪಾಟೀಲ, ‘ಸಹಕಾರ ಸಂಘಗಳ ರಚನೆ ಮತ್ತು ಕಾರ್ಯಚಟುವಟಿಕೆಗಳು’ ಕುರಿತು ಯಾದಗಿರಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಪ್ರಶಾಂತಕುಮಾರ ಹಾಗೂ ‘ಆಡಳಿತ ಮಂಡಳಿ ಸಭೆ ನಡೆಸುವ ವಿಧಾನ’ ಕುರಿತು ಸಹಕಾರ ಸಂಘಗಳ ಹಿರಿಯ ನಿರೀಕ್ಷಕ ಶಿವಶಂಕರ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕರಾದ ಶಾಂತಗೌಡ ಸಾದ್ಯಾಪುರ, ರಾಯಪ್ಪಗೌಡ ಹುಡೆದ, ರಾಮಕೃಷ್ಣ ಕಲಬುರಗಿ, ಚಿಕ್ಕಪ್ಪ ನಾಯ್ಕೋಡಿ, ಶ್ರೀಶೈಲ ನಾಯ್ಕೋಡಿ, ಸಣ್ಣ ನಿಂಗಪ್ಪ ನಾಯ್ಕೋಡಿ, ಶಂಕರಗೌಡ ಯಕ್ಷಂತಿ, ಶೇಖರಪ್ಪ ಅರಿಕೇರಿ, ಸಿದ್ದಣ್ಣ ಮಾನ್ಸೂಣಗಿ, ರಾಜಶ್ರೀ ಪ್ರೇಮನಾಥ ಶೆಟ್ಟಿ, ಅನ್ನಪೂರ್ಣ ಹೇಮವಾಡಗಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಹಕಾರ ಇಲಾಖೆಯ ಅಧಿಕಾರಿ ಶಂಸುದ್ದೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಿಲ್ಲಾ ಸಹಕಾರ ಶಿಕ್ಷಕಿ ಸುಜಾತ ಮಠ ನಿರೂಪಿಸಿದರು. ಒಕ್ಕೂಟದ ವ್ಯವಸ್ಥಾಪಕ ವಿರುಪಣ್ಣ ಸ್ವಾಗತಿಸಿದರು. ದ್ವಿತೀಯ ದರ್ಜೆ ಸಹಾಯಕ ಸಿದ್ದನಗೌಡ ವಂದಿಸಿದರು.
ನೌಕರರ ಸಹಕಾರ ಸಂಘಗಳು ಹಾಗೂ ವಿವಿಧೋದ್ದೇಶ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ನಿವೃತ್ತ ನೌಕರರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Leave a Reply