ಸೈದಾಪುರದಲ್ಲಿ ಶೀಘ್ರ ಕ್ರೀಡಾಂಗಣ ನಿರ್ಮಾಣ: ಶಾಸಕ ಕಂದಕೂರ ಭರವಸೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ತೆಲಂಗಾಣದ ಗಡಿಗೆ ಅಂಟಿಕೊಂಡ ಸೈದಾಪುರ ಪಟ್ಟಣ ದಿನೇದಿನೇ ಬೆಳೆಯುತ್ತಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ತಿಳಿಸಿದರು.

ಪಟ್ಟಣದ ಡಿಡಿಯು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪಟ್ಟಣದ ಸುತ್ತಮುತ್ತ ಕನಿಷ್ಠ ಮೂರು ಎಕರೆ ಸರ್ಕಾರಿ ಜಮಿಜನು ಗುರುತಿಸಿ ಶೀಘ್ರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ತಾವು ಉತ್ಸುಕರಾಗಿದ್ದೇವೆ ಎಂದರು.

ಗುರಮಠಕಲ್ ಕ್ಷೇತ್ರದ ಸೈದಾಪುರ ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿದ್ದು ದೈಹಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ಕೊಡಬೇಕಿದೆ ಎಂದು ಸಲಹೆ ನೀಡಿದ ಶಾಸಕರು, ಮಕ್ಕಳನ್ನು ಕ್ರೀಡೆಗಳತ್ತ ಸೆಳೆಯಲು ಸರ್ಕಾರ ಪ್ರತಿವರ್ಷ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಿದೆ. ಹೋಬಳಿ, ತಾಲೂಕು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಹೆಚ್ವಿನ ಉತ್ತೇಜನ ‌ನೀಡುತ್ತಿದೆ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶರಣೀಕ ಕುಮಾರ ದೋಕಾ ಮಾತನಾಡಿ, ನಮ್ಮ‌ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ ಮಟ್ಡದಲ್ಲಿ‌‌‌ ಮಿಂಚುವಂತೆ ಹಾರೈಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಕನ್ನೆಳ್ಳಿ ಮಾತನಾಡಿ, ಈ ಭಾಗದ 35 ಸರ್ಕಾರಿ ಶಾಲೆಗಳ‌ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಹೆಚ್ಚಿಸಲು ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಪ್ರಮುಖರಾದ ಭೀಮಣ್ಣಗೌಡ ಕ್ಯಾತ್ನಾಳ, ಯೋಗೇಶ್ ಕುಮಾರ್ ಧೋಕಾ, ಗುರನಾಥರೆಡ್ಡಿ ಗೌಡ, ಚಂದ್ರುಗೌಡ, ರಾಜು ಉಡುಪಿ, ಪರಮೇಶ ವಾರದ, ಚಂದ್ರು ಗೌಡ ಹೆಗ್ಗಣಗೇರಾ, ತಾಯಪ್ಪ ಬಂದೆಪಲ್ಲಿ, ಮರೆಪ್ಪ ನಟೇಕಾರ ಆನಂದ ಮೀರಿಯಲ್, ಚಂದುಗೌಡ, ಲಕ್ಷ್ಮಣ್ ನಾಯಕ್, ಮಲೇಶಿ ನಾಯಕ, ಶಿವು ಗೌಡ ಸೈದಾಪುರ, ಅಲಾವುದ್ದಿನ ನೀಲಹಳ್ಳಿ,, ಸಾಹೇಬಗೌಡ ಗೌಡಗೇರಾ, ಬಸವರಾಜ ಹಿರೇನೋರ, ಬಸವರೆಡ್ಡಿ ಹೆಗ್ಗಣಗೇರಾ ಇದ್ದರು.


ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾಂಗಣ ನಿರ್ಮಾಣ
ಗುರಮಠಕಲ್ ಮತ್ತು ಸೈದಾಪುರ ಪಟ್ಟಣದಲ್ಲಿ ಖೇಲೋ ಇಂಡಿಯಾ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಮನವಿ ಮಾಡಿದ್ದೇನೆ. ಅವರು ಸಹ ಸೂಕ್ತ ಸ್ಪಂದನೆ ನೀಡಿದ್ದಾರೆ. ಸ್ಥಳ ಗುರುತಿಸಿ ಕೊಟ್ಟಲ್ಲಿ ಮುಂದಿನ ಕಾರ್ಯಾನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ ಎಂದು ಶಾಸಕ ಕಂದಕೂರ ಹೇಳಿದರು.


ಸರಳತೆ ಮೆರೆದ ಶಾಸಕ ಕಂದಕೂರ
ಕ್ರೀಡಾಕೂಟದಲ್ಲಿ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಲು ಇಲಾಖೆಯಿಂದ ಪುಷ್ಪಾಲಂಕೃತ ತೆರೆದ ವಾಹನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದರೆ, ಅದನ್ನು ನಿರಾಕರಿಸಿದ ಶಾಸಕರು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಕ್ಕಳ ಪಥ ಸಂಚಲನ ವೀಕ್ಷಿಸುವ ಮೂಲಕ ಸರಳತೆ ಮೆರೆದರು. ಕಾರ್ಯಕ್ರಮಕ್ಕೂ ಮುನ್ನ ಶಾಲಾ ಮುದ್ದು‌ ಮಕ್ಕಳು ಶಾಸಕರನ್ನು ಪುಷ್ಪವೃಷ್ಠಿ ಮೂಲಕ ಭವ್ಯ ಸ್ವಾಗತ ಕೋರಿದ್ದು ವಿಶೇಷ ಎನಿಸಿತು.


ದೈಹಿಕ ಶಿಕ್ಷಕರ ನೇಮಕಾತಿಯ ಬಗ್ಗೆ ಬರುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು. ಈಗಾಗಲೇ ಸರ್ಕಾರ ಸಹ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ.
– ಶರಣಗೌಡ ಕಂದಕೂರ
ಗುರಮಠಕಲ್ ಶಾಸಕ

Leave a Reply

Your email address will not be published. Required fields are marked *

Suddi Belaku