
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಕಳೆದ 3 ವರ್ಷಗಳಲ್ಲಿ ನನ್ನ ಮತಕ್ಷೇತ್ರದ ಯಾದಗಿರಿ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ಯಾದಗಿರಿ ಮತಕ್ಷೇತ್ರದ ರಾಮಸಮುದ್ರ ತಾಂಡಾದಲ್ಲಿ 2025-26ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ ಎಸ್‌ಸಿಪಿ ಯೋಜನೆಯಡಿಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣ ಮಾಡುತ್ತಿರುವ 2 ಕೋಟಿ ರೂ. ವೆಚ್ಚದಲ್ಲಿ ರಾಮಸಮುದ್ರ ತಾಂಡಾದಿAದ ಆಶನಾಳ ತಾಂಡಾದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನಾನು ಮತಕ್ಷೇತ್ರದ ಗ್ರಾಮೀಣ ಭಾಗದ ಜನರಿಗೆ ಸರಳವಾಗಿ ಭೇಟಿಯಾಗುತ್ತೇನೆ, ಸಮಾಧಾನದಿಂದಲೇ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ, ಸರ್ಕಾರದ ವಿವಿಧ ಇಲಾಖೆಗಳಿಂದ ಸಾಧ್ಯವಾದಷ್ಟು ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದೇನೆ ಎಂದರು.
ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ನಿಗಧಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು, ಅಂದಾಗ ಮಾತ್ರ ಆ ಕೆಲಸ ಜನ ಸಾಮಾನ್ಯರಿಗೆ ಬಹು ದಿನಗಳ ಬಳಕೆಗೆ ಅನುಕೂಲವಾಗುತ್ತದೆ ಎಂದರು.
ಈಗಾಗಲೇ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಲಾಭ ನೇರವಾಗಿ ಜನರಿಗೆ ತಲುಪಿಸುತ್ತಿದೆ, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ಕ್ರೀಯಾಶೀಲರಿದ್ದಾರೆ, ರಾಜ್ಯದ ಎಲ್ಲಾ ಮತಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಾರೆ, ನಾನೂ ಕೂಡ ವಿಶೇಷವಾಗಿ ಅವರನ್ನು ಭೇಟಿಯಾಗಿ ಯಾದಗಿರಿ ಮತಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವ ಮೂಲಕ ಜನರಿಗೆ ತುರ್ತಾಗಿ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಂಡು ಬದಲಾವಣೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ನಾನು ಶಾಸಕನಾಗಿ ಆಯ್ಕೆಯಾದ ನಂತರ ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವ ಮೂಲಕ ಜನರಿಗೆ ಶಾಶ್ವತ ಅನುಕೂಲತೆ ಮಾಡಿಕೊಟ್ಟಿರುವ ಆತ್ಮತೃಪ್ತಿ ನನಗಿದೆ ಎಂದು ತಿಳಿಸಿದರು,
ವೇದಿಕೆ ಮೇಲೆ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮಹಾದೇವ ಬಾಬಳಗಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಪರಶುರಾಮ, ಇಂಜಿನಿಯರ್ ಹಣಮಂತ ಬಳಿಚಕ್ರ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ರೇಣುಕಾ, ಮುಖಂಡರಾದ ನಾಗಣ್ಣಗೌಡ ಹಳಿಗೇರಾ, ಗುತ್ತಿಗೆದಾರ ಹಣಮಂತ ಖಾನಳ್ಳಿ, ಬಾಸ್ಕರ್, ಹಣಮಂತ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.












Leave a Reply