ವಿದ್ಯಾರ್ಥಿ ಜೀವನವೇ ಭವಿಷ್ಯದ ಯಶಸ್ಸಿಗೆ ಭದ್ರ ಬುನಾದಿ: ಡಾ. ಎ. ಚನ್ನಪ್ಪ

Posted by

–

ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಆತ್ಮೀಯ ಸ್ವಾಗತ; ವಿವಿಧ ಕಾರ್ಯಚಟುವಟಿಕೆಗಳಿಗೆ ಚಾಲನೆ

ಸುದ್ದಿ ಬೆಳಕು ವಾರ್ತೆ

ರಾಯಚೂರು : ವಿದ್ಯಾರ್ಥಿ ಜೀವನವು ಭವಿಷ್ಯದ ಯಶಸ್ಸಿಗೆ ಭದ್ರ ಬುನಾದಿಯಾಗಿದ್ದು, ವಿದ್ಯಾರ್ಥಿನಿಯರು ಈ ಹಂತವನ್ನು ಸದುಪಯೋಗಪಡಿಸಿಕೊಂಡು ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಸಚಿವರು (ಆಡಳಿತ) ಡಾ. ಎ. ಚನ್ನಪ್ಪ, ಕೆಎಎಸ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ 2026–27ನೇ ಸಾಲಿನ ವಿವಿಧ ಕಾರ್ಯಚಟುವಟಿಕೆಗಳ ಉದ್ಘಾಟನೆ ಹಾಗೂ ಬಿ.ಎ., ಬಿ.ಕಾಂ., ಬಿ.ಎಸ್ಸಿ. ಮತ್ತು ಬಿ.ಸಿ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿನಿಯರು ಪದವಿ ಶಿಕ್ಷಣದ ಅವಧಿಯಲ್ಲಿ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುವುದರ ಜೊತೆಗೆ ಭವಿಷ್ಯದ ಗುರಿಯನ್ನು ಸ್ಪಷ್ಟವಾಗಿ ರೂಪಿಸಿಕೊಳ್ಳಬೇಕು. ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವುದು, ನಿರಂತರ ಜ್ಞಾನಾರ್ಜನೆ ಹಾಗೂ ಪರಿಶ್ರಮವು ಯಶಸ್ಸಿನ ಪ್ರಮುಖ ಸಾಧನಗಳಾಗಿವೆ ಎಂದು ಹೇಳಿದರು.

ಪದವಿ ಶಿಕ್ಷಣದ ಜೊತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯೂ ವಿದ್ಯಾರ್ಥಿನಿಯರು ಆಸಕ್ತಿ ಬೆಳೆಸಿಕೊಂಡು ಆರಂಭಿಕ ಹಂತದಿಂದಲೇ ಸಿದ್ಧತೆ ನಡೆಸಬೇಕು. ಸರ್ಕಾರದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಉತ್ತಮ ಅವಕಾಶಗಳಿದ್ದು, ಅವುಗಳನ್ನು ಪಡೆದುಕೊಳ್ಳಲು ಆತ್ಮವಿಶ್ವಾಸದಿಂದ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಉತ್ತಮ ಸಂಸ್ಕಾರ, ಶಿಸ್ತು ಅಗತ್ಯ

ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ರುದ್ರಮುನೇಶ್ವರ ಆಂಗ್ಲ ಮಾಧ್ಯಮ ಶಾಲೆ, ಚಿಕಲ್ಪರ್ವಿಯ ಸಂಸ್ಥಾಪಕ ಅಧ್ಯಕ್ಷ ಗಿರಿಧರ್ ಪೂಜಾರ ಮಾತನಾಡಿ, ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ನಿರ್ಮಾಣದ ಪ್ರಮುಖ ಹಂತವಾಗಿದೆ. ಈ ಹಂತದಲ್ಲಿ ವಿದ್ಯಾರ್ಥಿನಿಯರು ತಮ್ಮ ನಡೆ-ನುಡಿ, ಸ್ನೇಹ, ಅಭ್ಯಾಸ ಹಾಗೂ ನಿರ್ಧಾರಗಳ ಬಗ್ಗೆ ಜಾಗರೂಕರಾಗಿರಬೇಕು ಎಂದರು.

ತಂದೆ-ತಾಯಿಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಅನೇಕ ತ್ಯಾಗಗಳನ್ನು ಮಾಡುತ್ತಾರೆ. ಅವರ ನಿರೀಕ್ಷೆಗಳನ್ನು ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿನಿಯ ಕರ್ತವ್ಯ. ಜೀವನದಲ್ಲಿ ಯಶಸ್ಸು ಸಾಧಿಸಲು ಕೇವಲ ಅಂಕಗಳು ಅಥವಾ ಪದವಿ ಮಾತ್ರ ಸಾಕಾಗುವುದಿಲ್ಲ. ಉತ್ತಮ ಸಂಸ್ಕಾರ, ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ ಹಾಗೂ ಸತತ ಪರಿಶ್ರಮವೂ ಅಗತ್ಯ ಎಂದು ಹೇಳಿದರು.

ವಿದ್ಯಾರ್ಥಿನಿಯರು ತಮ್ಮ ಗುರಿಯನ್ನು ಸ್ಪಷ್ಟವಾಗಿ ರೂಪಿಸಿಕೊಂಡು ಯಾವುದೇ ಒತ್ತಡಕ್ಕೆ ಅಥವಾ ತಪ್ಪು ದಾರಿಗೆ ಒಳಗಾಗದೆ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಮಾರ್ಗದರ್ಶನ ನೀಡಿದ ಅವರು, ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ವಿಷಯಾಧಾರಿತ ಜ್ಞಾನ ಹಾಗೂ ನಿರಂತರ ಓದುವ ಅಭ್ಯಾಸ ಬೆಳೆಸಿಕೊಳ್ಳುವಂತೆ ತಿಳಿಸಿದರು.

ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಗುಣ ಬಸವರಾಜ ಅವರು ಪ್ರಥಮ ವರ್ಷದ ವಿದ್ಯಾರ್ಥಿನಿಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾಲೇಜಿನಲ್ಲಿ ದೊರೆಯುವ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಹಾಗೂ ಇತರ ಚಟುವಟಿಕೆಗಳ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡುವಂತೆ ಹಾರೈಸಿದರು.

ಶಿಕ್ಷಣದೊಂದಿಗೆ ಶಿಸ್ತು, ಸಂಸ್ಕಾರ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಒತ್ತು

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಸಾಂಸ್ಕೃತಿಕ ಘಟಕದ ಸಂಚಾಲಕರಾದ ಡಾ. ಪ್ರಸನ್ನಕುಮಾರ, 2026–27ನೇ ಸಾಲಿನಲ್ಲಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗುವ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಹಾಗೂ ವಿದ್ಯಾರ್ಥಿ ಅಭಿವೃದ್ಧಿ ಚಟುವಟಿಕೆಗಳ ರೂಪುರೇಷೆಗಳನ್ನು ವಿವರಿಸಿದರು.

ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿನಿಯರ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ. ಜ್ಯೋತಿ ಸಿ.ಕೆ., ಐಕ್ಯೂಎಸಿ ಸಹ ಸಂಯೋಜಕರಾದ ಶ್ರೀ ಶರಣಗೌಡ ಕೆ., ಸಿಬ್ಬಂದಿ ಕಾರ್ಯದರ್ಶಿಗಳಾದ ಡಾ. ಸೈಯಾದ ರಶೀದಾ ಪರ್ವೀನ್, ಡಾ. ಸಂತೋಷ್ ಕುಮಾರ್, ಶ್ರೀ ರಂಗನಾಥ್ ಬಿಲ್ಲಾರ್ ಹಾಗೂ ಡಾ. ಸ್ವರೂಪ ರಾಣಿ ಉಪಸ್ಥಿತರಿದ್ದರು.

ಪ್ರಾಧ್ಯಾಪಕರಾದ ಡಾ. ಉಮಾದೇವಿ, ಶ್ರೀಮತಿ ಸುಮಿತ್ರ ಪ್ಯಾಟಿ, ಡಾ. ಸುರೇಶ ಶರಣಪ್ಪ, ಶ್ರೀಮತಿ ಸರಸ್ವತಿ, ಡಾ. ಚೆನ್ನಬಸವ, ಡಾ. ಅಸ್ಮ ಸೇರಿದಂತೆ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಕು. ಸುಚಿತ್ರಾ ನಿರೂಪಿಸಿದರು. ಕು. ಸೌಜನ್ಯ ಪ್ರಾರ್ಥಿಸಿದರು. ಕು. ಸಾನಿಯಾ ಸ್ವಾಗತಿಸಿದರು. ಕು. ನಾಗಮ್ಮ ವಂದಿಸಿದರು.

Leave a Reply

Your email address will not be published. Required fields are marked *

↑
Suddi Belaku