ರಾಯಚೂರಿನಲ್ಲಿ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ಬಳಕೆಗೆ ಜಾಗೃತಿ

Posted by

–

ಸುದ್ದಿ ಬೆಳಕು ವಾರ್ತೆ

ರಾಯಚೂರು : ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌ ಹಾಗೂ ವೆಂಡಿಂಗ್‌ ಮೆಷಿನ್‌ ಬಳಕೆಯ ಕುರಿತು ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಂಗವಾಗಿ ‘ಗರ್ಭಕಂಠದ ಕ್ಯಾನ್ಸರ್‌–ಕ್ಯಾನ್ಸರ್‌ ಮುಕ್ತ ಮಹಿಳೆ–ಪ್ಲಾಸ್ಟಿಕ್‌ ಮುಕ್ತ ಪರಿಸರ’ ಎಂಬ ವಿಷಯದ ಕುರಿತು ಅರಿವು ಮೂಡಿಸಲಾಯಿತು. ವಿದ್ಯಾರ್ಥಿನಿಯರ ಬಳಕೆಗಾಗಿ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌ ಹಾಗೂ ವೆಂಡಿಂಗ್‌ ಮೆಷಿನ್‌ ಅನ್ನು ಉಚಿತವಾಗಿ ನೀಡಲಾಗಿದ್ದು, ಅವುಗಳ ಬಳಕೆಯ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಗುಣ ಬಸವರಾಜ್ ಮಾತನಾಡಿ, ಹೆಣ್ಣುಮಕ್ಕಳ ಋತುಚಕ್ರವು ವೈಜ್ಞಾನಿಕ ಹಾಗೂ ದೇಹದ ಆರೋಗ್ಯವನ್ನು ಕಾಪಾಡುವ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಈ ಕುರಿತು ಯಾವುದೇ ಹೆಣ್ಣುಮಗುವಿಗೂ ಹಿಂಜರಿಕೆ ಇರಬಾರದು. ಬಳಸುವ ಸ್ಯಾನಿಟರಿ ಪ್ಯಾಡ್‌ಗಳು ಪ್ಲಾಸ್ಟಿಕ್‌ ಮುಕ್ತವಾಗಿರುವುದು ಉತ್ತಮ. ಪರಿಸರ ಸ್ನೇಹಿ ಪ್ಯಾಡ್‌ಗಳು ಪರಿಸರ ಹಾಗೂ ಸ್ವ-ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದ ರಾಯಚೂರಿನ ಮಹಿಳಾ ಆರೋಗ್ಯ ಜಾಗೃತಿದಾರರಾದ ಶ್ರೀ ಚನ್ನಪ್ಪ ಪಾಟೀಲ್ ಮಾತನಾಡಿ, ಗರ್ಭಕಂಠದ ಕ್ಯಾನ್ಸರ್‌ ಕುರಿತು ಹಾಗೂ ಅದರ ನಿಯಂತ್ರಣದಲ್ಲಿ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌ಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿಗೆ ಸ್ಯಾನಿಟರಿ ಪ್ಯಾಡ್‌ ಹಾಗೂ ವೆಂಡಿಂಗ್‌ ಮೆಷಿನ್‌ ಒದಗಿಸುವ ಮೂಲಕ ವಿದ್ಯಾರ್ಥಿನಿಯರಲ್ಲಿ ಅವುಗಳ ಸರಿಯಾದ ಬಳಕೆಯ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಂಘಟಕರಾದ ಶ್ರೀಮತಿ ಸರಸ್ವತಿ ಕೆ., ಇಕೋ ಕ್ಲಬ್‌ ಹಾಗೂ ರೇಂಜರ್ಸ್‌ ಯುನಿಟ್‌ ಸಂಚಾಲಕರು, ಹಾಗೂ ಡಾ. ಸ್ವರೂಪರಾಣಿ, ಸ್ಟೂಡೆಂಟ್‌ ವೆಲ್ಫೇರ್‌ ಸೆಲ್‌ ಸಂಚಾಲಕರು, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗರ್ಭಕಂಠದ ಆರೋಗ್ಯ, ವೈಯಕ್ತಿಕ ಸ್ವಚ್ಛತೆ ಹಾಗೂ ಮಹಿಳೆಯರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಅಗತ್ಯದ ಕುರಿತು ಮಾಹಿತಿ ನೀಡಲಾಯಿತು. ಮಹಿಳೆಯರಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಹೆಚ್ಚಿನ ಪರಿಣಾಮ ಬೀರಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಕಾಲೇಜಿನ ಬೋಧಕ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Reply

Your email address will not be published. Required fields are marked *

↑
Suddi Belaku