
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಜನರ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರು ಸಮಾಜದ ಸ್ವಾಸ್ಥ ಕಾಪಾಡುವುದರೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕವು ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪದಗ್ರಹಣ, ಪತ್ರಿಕಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಸಸಿಗೆ ನೀರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವದ ಈ ವ್ಯವಸ್ಥೆಯಲ್ಲಿ ನಾಲ್ಕನೆ ಅಂಗವಾಗಿ ಸಮರ್ಥವಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರು ನೆಗೆಟಿವ್ ಸುದ್ದಿಗಳು ಪ್ರಕಟಿಸುವಾಗ ಮತ್ತು ತೋರಿಸುವಾಗ ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರು ಅಧಿಕೃತ ಅಂಗಗಳ ಜತೆ ಪತ್ರಿಕಾ ರಂಗವೂ ಬಹಳ ಪ್ರಮುಖವಾಗಿದ್ದು, ಸಮಾಜದ ಕನ್ನಡಿಯಂತೆಯೇ ಕೆಲಸ ಮಾಡುತ್ತಿದೆ ಎಂದು ಶಾಸಕರು ಹೇಳಿದರು. ಅಧ್ಯಕ್ಷ ಇಂದೂಧರ ಸಿನ್ನೂರ ನೇತೃತ್ವದಲ್ಲಿ ನಿರಂತರ ಉತ್ತಮ ಕೆಲಸಗಳು ಮಾಡಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿ ಜಿಪಂ ಸಿಇಒ ಲವೀಶ್ ಒರ್ಡಿಯಾ ಮಾತನಾಡಿ, ಅಭಿವೃದ್ಧಿಯಲ್ಲಿ ಸರ್ಕಾರದಷ್ಟೇ ಪ್ರಮುಖ ಪಾತ್ರ ಪತ್ರಕರ್ತರದ್ದು ಇದೆ. ತಪ್ಪುಗಳಾದ ಅವುಗಳನ್ನು ಎತ್ತಿತೊರಿಸುವ ಕೆಲಸದೊಂದಿಗೆ ಸಲಹೆಗಳನ್ನು ನೀಡಿದರೇ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದರು.
ನೂತನ ಸಂಘದಿಂದ ಸಮಾಜಮುಖಿ ಕೆಲಸಗಳಾಗಲಿ ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮಾಧ್ಯಮ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ನೂತನ ಜಿಲ್ಲೆಯ ಅಭಿವೃದ್ದಿಗೆ ಸರ್ಕಾರಗಳೊಂದಿಗೆ ಪತ್ರಕರ್ತರು ಕೈಜೋಡಿಸಿ ಕೆಲಸ ಮಾಡಿದ್ದರಿಂದಲ್ಲೇ ಅನೇಕ ಯೋಜನೆ ಇಲ್ಲಿಗೆ ತಲುಪಲು ಸಾಧ್ಯವಾಗಿದೆ ಎಂದರು.
ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಮಾತನಾಡಿ, ಆಳುವ ಸರ್ಕಾರಕ್ಕೆ ಕೇಳುವ ಪ್ರತಿಪಕ್ಷವಾಗಿ ಪತ್ರಕರ್ತರು ಕೆಲಸ ಮಾಡುತ್ತಿದ್ದು, ಗಿರಿಜಿಲ್ಲೆಯ ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ ಬಹಳಷ್ಟು ಇದೆ ಎಂದರು.
ಬಿಜೆಪಿ ರಾಜ್ಯಕಾರ್ಯಕಾರಿ ಸದಸ್ಯ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ಪ್ರಜಾಪ್ರಭುತ್ವದ ಮೂರು ಅಂಗಗಳಷ್ಟೇ ಗಟ್ಟಿಯಾಗಿರುವ ಮಾಧ್ಯಮ ರಂಗವು ಸಮಾಜದ ಕನ್ನಡಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಅಂತರರಾಷ್ಟ್ರೀಯ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿ, ಸರ್ಕಾರದ ಯೋಜನೆಗಳು ಕಾರ್ಯಗತವಾಗುವಲ್ಲಿ ಪತ್ರಕರ್ತರ ಕಾರ್ಯ ಮುಂಚುಣಿಯಲ್ಲಿದೆ ಎಂದರು.
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉಪಾಧ್ಯಕ್ಷ ಗುಂಡಪ್ಪ ಕಲಬುರಗಿ, ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ಮಾತನಾಡಿದರು.

ಕಕಾಪ ಧ್ವನಿ ಜಿಲ್ಲಾಧ್ಯಕ್ಷ ಇಂದೂಧರ ಸಿನ್ನೂರ್ ಅಧ್ಯಕ್ಷತೆ ವಹಿಸಿದ್ದರು.
ಎಡಿಸಿ ರಮೇಶ ಕೋಲಾರ, ಉದ್ಯಮಿಗಳಾದ ಮಲ್ಲಿಕಾರ್ಜುನ ಸಿರಗೋಳ, ದಿನೇಶ ಧೋಕಾ, ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ,ಪಿಎಸ್ ಐ ಹೇಮಾವತಿ, ಕಕಾಪ ಧ್ವನಿ ಜಿಲ್ಲಾ ಉಪಾಧ್ಯಕ್ಷ ದಿನೇಶ್, ಕಾರ್ಯದರ್ಶಿ ಕು ದಾನ್ ಸಾಬ್, ಸಂಘಟನಾ ಕಾರ್ಯದರ್ಶಿ ರೂಪೇಶ ಹುಲಿಕರ ವೇದಿಕೆಯಲ್ಲಿದ್ದರು.
ಈ ವೇಳೆ ಡಾ.ಕಮಲಾ ಇಂದೂಧರ ಸಿನ್ನೂರ ಅವರ ಅಕ್ಕಮಹಾದೇವಿ ಕೃತಿ ಬಿಡುಗಡೆ ಮಾಡಲಾಯಿತು. ಪತ್ರಕರ್ತರಾದ ಮಲ್ಲಿಕಾರ್ಜುನರೆಡ್ಡಿ ಹತ್ತಿಕುಣಿ, ವೀರೇಶ ಮತ್ತು ಪತ್ರಿಕೆ ವಿತರಕರಾದ ಪ್ರವೀಣ, ವಿಷ್ಣು ಅವರನ್ನು ಸನ್ಮಾನಿಸಲಾಯಿತು.
ಖಜಾಂಚಿ ನಾಗಪ್ಪ ಮಾಲಿಪಾಟೀಲ್ ಸ್ವಾಗತಿಸಿದರು.
ರಿಯಾಜ್ ಪಟೇಲ್ ನಿರೂಪಿಸಿದರು, ಮಹೇಶ ಶಿರವಾಳ ತಂಡ ಪ್ರಾರ್ಥಿಸಿತು. ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳ ಪದಾಧಿಕಾರಿಗಳು, ರೈತ ಸಂಘಟನೆ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಬದಲಾದ ಕಾಲಘಟ್ಟದಲ್ಲಿ ಕ್ಷಣದಲ್ಲಿ ಮಾಹಿತಿ ಲಭ್ಯ
ವಿಶೇಷ ಉಪನ್ಯಾಸ ನೀಡಿದ ಟಿಎಸ್ ಆರ್ ಪ್ರಶಸ್ತಿ ಪುರಸ್ಕ್ರತರೂ ಆದ ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್, ಪತ್ರಿಕಾರಂಗ ಇಂದು ಪ್ರತಿಕೋದ್ಯಮವಾಗಿ ಬದಲಾಗಿದೆ,ಇದು ಅನಿವಾರ್ಯವೂ ಹೌದು. ದೇಶ,ವಿದೇಶಗಳ ಪ್ರಚಲಿತ ವಿಷಯಗಳಿಗೆ ಮೊದಲೇಲ್ಲ ಜನರು ಪತ್ರಿಕೆಗಳನ್ನೇ ನೆಚ್ಚಿಕೊಂಡಿದ್ದರು. ಬದಲಾದ ಕಾಲಘಟ್ಟದಲ್ಲಿ ಟಿವಿ,ಸಾಮಾಜಿಕ ಜಾಲತಾಣ ಸೇರಿದಂತೆಯೇ ಇತರೇ ಮಾಧ್ಯಮಗಳನ್ನು ಜನರು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ.ಹಿಂದೇ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಪತ್ರಕರ್ತರು ಬಹಳಷ್ಟು ಕಷ್ಟಪಟ್ಟು ಕೆಲಸ ಮಾಡಬೇಕಿತ್ತು, ಆದರೇ ಮುಂದುವರೆದ ತಂತ್ರಜ್ಞಾನದಿಂದ ಕುಳಿತಲ್ಲೇ ಜಗತ್ತಿನ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಜನರಿಗೆ ನೀಡುವಂತಹ ಕಾಲ ಬಂದಿದೆ. ಪತ್ರಕರ್ತರನ್ನು ನೋಡುವ ದೃಷ್ಡಿಕೋನ ಬದಲಾಗಿದೆ, ಕಾರಣ ಎಚ್ಚರದಿಂದ ಗೌರವದಿಂದ ಕೆಲಸ ಮಾಡಬೇಕಿದೆ ಎಂದರು.











Leave a Reply