
ಸುದ್ದಿ ಬೆಳಕು ವಾರ್ತೆ
ಸೈದಾಪುರ : ಬೀದರ-ಗುತ್ತಿ ರಾಷ್ಟ್ರೀಯ ಹೆದ್ದಾರಿ 150 ಮಾರ್ಗದ ಕಡೇಚೂರು ದಿಂದ ಸೈದಾಪುರ (108-116ಕಿ.ಮೀ) ಮಧ್ಯದಲ್ಲಿ ಕೇಂದ್ರ ಸರ್ಕಾರದ ಸೌಮ್ಯದ ಎಚ್.ಪಿ.ಸಿ.ಎಲ್.ಸಂಸ್ಥೆಯ ಎಚ್.ಪಿ.ಪೆಟ್ರೋಲ್ ಪಂಪ್ ಡೀಲರ್ ಶಿಪ್ ಹಂಚಿಕೆಯಲ್ಲಿ ಗಂಭೀರ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಸ್ಥಳೀಯ ಮೂಲಗಳ ಪ್ರಕಾರ, ಈ ಪೆಟ್ರೋಲ್ ಪಂಪ್ ಡೀಲರ್ ಶಿಪ್ ಅನ್ನು ಪಡೆದುಕೊಳ್ಳಲು 2023ರಲ್ಲಿ ಹಿಂದೂಳಿದ ವರ್ಗ ಮೀಸಲಾತಿ ಅಡಿಯಲ್ಲಿ ಅರ್ಜಿ ಅಹ್ವಾನಿಸಲಾಗಿತ್ತು. ಅದರಂತೆ ಅನೇಕರು ಅರ್ಜಿ ಸಲ್ಲಿಸಿದರು ಆ ವೇಳೆ ರಾಜ್ಯ ಪಟ್ಟಿಯಲ್ಲಿ ಒಬಿಸಿ ಮತ್ತು ಕೇಂದ್ರ ಸರ್ಕಾರದ ಜಾತಿ ಪಟ್ಟಿಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಿದರು, ಅದರಂತೆ ಕೇಂದ್ರ ಸರ್ಕಾರ ಆದೇಶದಂತೆ ಒಬಿಸಿ ವರ್ಗಕ್ಕೆ ನೀಡಬೇಕಾಗಿದ್ದರೂ, ಅದು ಸಾಮಾನ್ಯ ವರ್ಗದ ವ್ಯಕ್ತಿಗೆ ನೀಡಲಾಗಿದೆ. ಇದರಿಂದ ಒಬಿಸಿ ವರ್ಗದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರಕದೆ, ಮೀಸಲಾತಿ ವ್ಯವಸ್ಥೆಯೇ ಪ್ರಶ್ನೆಗೆ ಒಳಗಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಅರ್ಜಿ ಸಲ್ಲಿಸಿದ ಅಭ್ಯರ್ಥಿ , ಹಿಂದೂಳಿದ ವರ್ಗಗಳ ಸಂಘಟನೆಗಳು ಮತ್ತು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಅನೇಕ ಬಾರಿ ಲಿಖಿತ ದೂರುಗಳನ್ನು ಸಲ್ಲಿಸಿದ್ದರೂ, ಇಲ್ಲಿಯ ವರೆಗೂ ಯಾವುದೇ ದೃಢವಾದ ಕ್ರಮ ಕೈಗೊಳ್ಳದಿರುವುದು ಜನರಲ್ಲಿ ಅಸಮಾಧಾನವನ್ನು ಹೆಚ್ಚಿಸಿದೆ. ಇದರಿಂದ ಮೀಸಲಾತಿ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಇದು ಸ್ಪಷ್ಟ ಅನ್ಯಾಯವಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಯುವ ಮುಖಂಡ ಮರೆಪ್ಪ ರಾಂಪೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತದ ನಿಲುವು ಪ್ರಶ್ನಾರ್ಥಕ:
ಈ ವಿಷಯವಾಗಿ ಜಿಲ್ಲಾಡಳಿತ ಇನ್ನೂ ಸ್ಪಷ್ಟ ಪ್ರತಿಕ್ರಿಯೆ ನೀಡದೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ. ದೂರುಗಳ ಮೇಲೆ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿರುವುದು ಜನರಲ್ಲಿ ಆಡಳಿತದ ಮೇಲಿನ ನಂಬಿಕೆಯನ್ನು ಕುಂದಿಸುತ್ತಿದೆ.
ಈ ಡೀಲರ್ ಶಿಪ್ ಹಂಚಿಕೆಯಲ್ಲಿ ನಡೆದಿರುವ ಪ್ರಕ್ರಿಯೆಯ ಪೂರ್ಣ ತನಿಖೆ ಮಾಡಿ ತಪ್ಪು ಕಂಡುಬಂದಲ್ಲಿ ಹಂಚಿಕೆಯನ್ನು ರದ್ದುಪಡಿಸಿ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅರ್ಹ ಅಭ್ಯರ್ಥಿಗೆ ಮರುಹಂಚಿಕೆ ಮಾಡಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
ನಮ್ಮ ಭಾಗದ ಉದ್ದೇಶಿತ ಸ್ಥಳದಲ್ಲಿ ಎಚ್.ಪಿ.ಪೆಟ್ರೋಲ್ ಪಂಪ್ ಡೀಲರ್ ಶಿಪ್ ಪಡೆಯಲು ನಾನು ಅರ್ಜಿ ಸಲ್ಲಿಸಿದೆ, ಆದರೆ ಈ ಹಂಚಿಕೆಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸದೆ, ಮೀಸಲಾತಿ ಹಕ್ಕನ್ನು ಉಲ್ಲಂಘಿಸಿದರೆ ಇದು ಕಾನೂನುಬಾಹಿರ.
ಈ ಕುರಿತು ಜಿಲ್ಲಾಡಳಿತಕ್ಕೆ ಮತ್ತು ಎಚ್.ಪಿ.ಸಿ,ಎಲ್ ಸಂಸ್ಥೆಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ದಯವಿಟ್ಟು ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ಮಧ್ಯ ಪ್ರವೇಶಿಸಿ ಈ ಪ್ರಕರಣವನ್ನು ಸಂಪೂರ್ಣ ತನಿಖೆ ಮಾಡಿ, ಅರ್ಹ ವ್ಯಕ್ತಿಗೆ ಹಂಚಿಕೆ ಮಾಡಬೇಕು.
•ಸಾಬಣ್ಣ ಬಾಗ್ಲಿ ಸೈದಾಪುರ, ಪೆಟ್ರೋಲ್ ಪಂಪ್ ಡೀಲರ್ ಶಿಪ್‍ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿ.
ಮೀಸಲಾತಿ ವ್ಯವಸ್ಥೆ ಸಮಾಜದ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ ಸಾಧನ. ಅದನ್ನೇ ಉಲ್ಲಂಘಿಸುವ ಘಟನೆಗಳು ನಡೆಯುತ್ತಿದ್ದರೆ, ಇದು ಕೇವಲ ಒಂದು ಪ್ರಕರಣವಲ್ಲ, ಸಂಪೂರ್ಣ ವ್ಯವಸ್ಥೆಯ ಮೇಲಿನ ನಂಬಿಕೆಗೆ ಹೊಡೆತ. ಸೈದಾಪುರ–ಕಡೇಚೂರು ಪೆಟ್ರೋಲ್ ಪಂಪ್ ಡೀಲರ್ ಶಿಪ್ ಹಂಚಿಕೆ ಪ್ರಕರಣದಲ್ಲಿ ಸತ್ಯ ಬಹಿರಂಗವಾಗಬೇಕೆಂಬುದು ನಮ್ಮ ಬೇಡಿಕೆ.
• ಅನೀಲ್ ನಂದೇಪಲ್ಲಿ, ಹಿಂದುಳಿದ ವರ್ಗಗಳ ಯುವ ಮುಖಂಡ ಗುರುಮಠಕಲ್










Leave a Reply