ಗುರುಮಠಕಲ್‌ಗೆ ಜಿಲ್ಲಾಧಿಕಾರಿ ಭೇಟಿ: ಅಧಿಕಾರಿಗಳ ಸಭೆ, ಸಾರ್ವಜನಿಕ ಸಮಸ್ಯೆಗಳ ಪರಿಶೀಲನೆ

Posted by

–

ಸುದ್ದಿ ಬೆಳಕು ವಾರ್ತೆ

ಗುರುಮಠಕಲ್‌ : ಯಾದಗಿರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಗುರುಮಠಕಲ್‌ಗೆ ಭೇಟಿ ನೀಡಿ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.
ಪಟ್ಟಣದ ತಹಶಿಲ್ದಾರರ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ, ಸರ್ಕಾರದ ಯೋಜನೆಗಳ ಅನುಷ್ಠಾನ ಹಾಗೂ ಸಾರ್ವಜನಿಕರಿಗೆ ಸಿಗುತ್ತಿರುವ ಸೌಲಭ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಇಲಾಖೆಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಪಟ್ಟಣದ ಹೊರವಲಯದ ಚಪೆಟ್ಲಾ ರಸ್ತೆಯಲ್ಲಿನ ರೈತರ ಜಮೀನುಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಬೆಳೆ ಬಿತ್ತನೆ ಹಾಗೂ ಬೆಳೆ ಹಾನಿಯ ಸ್ಥಿತಿಗತಿಗಳನ್ನು ಖುದ್ದು ಪರಿಶೀಲಿಸಿದರು. ಈ ಕುರಿತು ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ್ ಅವರಿಂದ ಮಾಹಿತಿ ಪಡೆದರು.
ಎಫ್‌ಐಡಿ ಸಮಸ್ಯೆಯಿಂದ ಪರಿಹಾರಕ್ಕೆ ಅಡ್ಡಿ
ಸ್ಥಳೀಯರು ರೈತರ ಎಫ್‌ಐಡಿ ಸಮಸ್ಯೆಯಿಂದ ಪರಿಹಾರ ಪಡೆಯಲು ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಆಧಾರ್‌ ಲಿಂಕ್‌ ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ಕೆಲ ರೈತರಿಗೆ ಸಮಸ್ಯೆಯಾಗಿದ್ದು, ಅವುಗಳನ್ನು ಪರಿಹರಿಸುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಶುದ್ಧೀಕರಿಸದೆ ನೀರು ಪೂರೈಕೆ?
ಗುರುಮಠಕಲ್‌ ಪಟ್ಟಣಕ್ಕೆ ಭೀಮಾ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ವೈಜ್ಞಾನಿಕವಾಗಿ ಸಮರ್ಪಕ ಫಿಲ್ಟರ್‌ ಮಾಡದೆ ನೀರು ಪೂರೈಕೆಯಾಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಪತ್ರಕರ್ತರೊಬ್ಬರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಈ ಸಮಸ್ಯೆಯನ್ನು ಈ ಹಿಂದೆಯೂ ಲೋಕಾಯುಕ್ತರ ಗಮನಕ್ಕೆ ತರಲಾಗಿತ್ತು ಎಂದು ತಿಳಿಸಿದರು. ವಿಷಯವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಆರು ವರ್ಷದಿಂದ ನೆನೆಗುದಿಗೆ ಬಿದ್ದ ನಿವೇಶನ ಹಂಚಿಕೆ
ಗೃಹ ನಿರ್ಮಾಣ ಮಂಡಳಿಯ ನಿವೇಶನ ಹಂಚಿಕೆ ಪ್ರಕ್ರಿಯೆ ಕಳೆದ ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಗೃಹ ನಿರ್ಮಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಎಸ್‌ಬಿಐ ಸ್ಥಳಾಂತರಕ್ಕೂ ವಿರೋಧ
ಗುರುಮಠಕಲ್‌ನ ಎಸ್‌ಬಿಐ ಬ್ಯಾಂಕ್‌ ಅನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ಸ್ಥಳೀಯರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಬ್ಯಾಂಕ್‌ ಸ್ಥಳಾಂತರಗೊಂಡರೆ ಸಾರ್ವಜನಿಕರಿಗೆ ತೊಂದರೆಯಾಗಲಿದ್ದು, ಹೊಸ ಸ್ಥಳದಲ್ಲಿ ಕಳ್ಳತನ, ದರೋಡೆ ಹಾಗೂ ವಾಹನ ಅಪಘಾತಗಳಂತಹ ಅಪಾಯಗಳ ಸಾಧ್ಯತೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ  ಅಂಬರೀಷ್‌ ಪಾಟೀಲ್‌, ಗ್ರೇಡ್‌-2 ತಹಸೀಲ್ದಾರ್‌ ನರಸಿಂಹಸ್ವಾಮಿ, ಶಿಶು ಅಭಿವೃದ್ಧಿ ಅಧಿಕಾರಿ ಶರಣಬಸಪ್ಪ
ಎಇಇ ಪರಶುರಾಮ್‌,  ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ್, ಕೃಷಿ ಇಲಾಖೆ, ನಾಮದೇವ ಸಿಬ್ಬಂದಿ ವೆಂಕಟೇಶ  ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳು .

ರೈತರು ಹಾಗೂ ಸಾರ್ವಜನಿಕರಿಂದ ಬಂದಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಂದ ವರದಿ ಪಡೆದು, ಸಮಸ್ಯೆಗಳ ಪರಿಹಾರಕ್ಕೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
–ಪಾಂಡ್ವೆ ರಾಹುಲ್ ತುಕಾರಾಮ್
ನೂತನ ಜಿಲ್ಲಾಧಿಕಾರಿ ಯಾದಗಿರಿ

Leave a Reply

Your email address will not be published. Required fields are marked *

↑
Suddi Belaku