ನಗನೂರು ದುರಂತ ಪೀಡಿತರಿಗೆ ಪರಿಹಾರ ಘೋಷಣೆ ಮಾಡಿ: ಶಾಸಕ ಕಂದಕೂರ ಆಗ್ರಹ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ, ಏಪ್ರಿಲ್ 20 : ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಸಂಭವಿಸಿದ ದುರಂತ ಘಟನೆಗಳ ಪೀಡಿತ ಕುಟುಂಬಗಳಿಗೆ ತಕ್ಷಣ ಪರಿಹಾರಧನ ಘೋಷಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಾರ್ಚ್ 29, 2026ರಂದು ನಗನೂರು ಗ್ರಾಮದಲ್ಲಿ ರೈತನ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ದಲಿತ ಮಕ್ಕಳು ಬಿಸಿಲಿನ ತಾಪದ ನಡುವೆ ಮೃತಪಟ್ಟಿದ್ದರು. ಈ ದುರ್ಘಟನೆಗೆ ಸುಮಾರು 20 ದಿನಗಳು ಕಳೆದರೂ ಸರ್ಕಾರದಿಂದ ಯಾವುದೇ ಪರಿಹಾರ ಘೋಷಣೆ ಅಥವಾ ಸಾಂತ್ವನ ಸೂಚನೆ ನೀಡದಿರುವುದು ದುಃಖಕರವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೇ ಮುಂದುವರೆಸಿ, ಏಪ್ರಿಲ್ 17ರಂದು ಸುರಪುರ ತಾಲೂಕಿನ ಗೋಪಾಲಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದ ಸಿರವಾರ ಗ್ರಾಮದ ಒಂದೇ ಕುಟುಂಬದ ಒಂಬತ್ತು ಮಂದಿ ರಸ್ತೆ ಅಪಘಾತದಲ್ಲಿ ಸಜೀವ ದಹನಗೊಂಡ ಘಟನೆ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಈ ಘಟನೆಗೂ ನಾಲ್ಕು ದಿನಗಳು ಕಳೆದರೂ ಸರ್ಕಾರ ಸ್ಪಂದಿಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಇದರ ಮಧ್ಯೆ, ಮೈಸೂರು ಜಿಲ್ಲೆಯಲ್ಲಿ ನಡೆದ ಸಮಾನ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಕ್ಷಣವೇ ತಲಾ ₹5 ಲಕ್ಷ ಪರಿಹಾರ ಘೋಷಿಸಿರುವುದನ್ನು ಉಲ್ಲೇಖಿಸಿದ ಅವರು, ರಾಜ್ಯದ ಎಲ್ಲ ಭಾಗಗಳಿಗೂ ಸಮಾನ ಸ್ಪಂದನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ಅಸಮಾಧಾನ ಮೂಡಿರುವ ಹಿನ್ನೆಲೆ, ನಗನೂರು ಮತ್ತು ಸಿರವಾರ ದುರಂತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಕ್ಷಣ ತಲಾ ₹5 ಲಕ್ಷ ಪರಿಹಾರಧನ ಘೋಷಿಸಿ, ಸರ್ಕಾರ ಅಧಿಕೃತವಾಗಿ ಸಾಂತ್ವನ ವ್ಯಕ್ತಪಡಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Suddi Belaku