ಜಮಖಂಡಿ : ರಾಮಕೃಷ್ಣ ಪರಮಹಂಸರಿಗೆ ಸ್ವಾಮಿ ವಿವೇಕಾನಂದರು ಶಿಷ್ಯರಾಗಿದ್ದಂತೆ, ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳವರಿಗೆ ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮಿಗಳು ಶಿಷ್ಯರಾಗಿದ್ದರು ಎಂದು ಕಾಗವಾಡ ಶಿವಾನಂದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಡಾ. ಎಂ.ಬಿ. ಹೂಗಾರ ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದ ಆಶ್ರಯದಲ್ಲಿ ಭಾನುವಾರ ಸಂಜೆ ನಡೆದ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳವರ ಹಾಗೂ ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮಿಗಳ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಮಹಾಸ್ವಾಮಿಗಳು ಸಮಯಕ್ಕೆ ಬಹಳ ಮಹತ್ವ ನೀಡುತ್ತಿದ್ದರು. ಅವರ ಕೈಯಲ್ಲಿ ಗಡಿಯಾರ ಇಲ್ಲದಿದ್ದರೂ, ಅವರ ನರನಾಡಿಗಳೇ ಗಡಿಯಾರದಂತೆ ಕಾರ್ಯನಿರ್ವಹಿಸುತ್ತಿದ್ದವು. ಅಷ್ಟೊಂದು ಸೂಕ್ಷ್ಮಜ್ಞಾನ ಅವರಲ್ಲಿತ್ತು ಎಂದು ಹೇಳಿದರು.
ಭಕ್ತರ ಮನಪರಿವರ್ತನೆ ಮಾಡುವ ಮೂಲಕ ಬದುಕುವ ಕಲೆಯನ್ನು ತಿಳಿಸಿಕೊಟ್ಟ ಮಲ್ಲಿಕಾರ್ಜುನ ಶಿವಯೋಗಿಗಳವರ ವ್ಯಕ್ತಿತ್ವ ವಿಸ್ಮಯ ಮೂಡಿಸುವಂತಿತ್ತು. ಅವರ ಹೆಸರನ್ನು ಜನಮಾನಸದಲ್ಲಿ ಸ್ಥಿರವಾಗಿ ನೆಲೆಗೊಳಿಸಿದವರು ಸಿದ್ಧೇಶ್ವರ ಮಹಾಸ್ವಾಮಿಗಳು ಎಂದು ತಿಳಿಸಿದರು.
ಶಸ್ತ್ರದಿಂದ ಸಾಧ್ಯವಾಗದ ಕಾರ್ಯವನ್ನು ಶಾಸ್ತ್ರದಿಂದ ಸಾಧಿಸಿದರು
ವಿಜಯಪುರದ ಜ್ಞಾನಯೋಗಾಶ್ರಮದ ಸುಜ್ಞಾನಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಶಸ್ತ್ರದಿಂದ ಮಾಡಲಾಗದ ಕಾರ್ಯವನ್ನು ಶಾಸ್ತ್ರದ ಮೂಲಕ ಮಾಡಿ ತೋರಿಸಿದ ಮಲ್ಲಿಕಾರ್ಜುನ ಶಿವಯೋಗಿಗಳು ಹಾಗೂ ಸಿದ್ಧೇಶ್ವರ ಶ್ರೀಗಳಿಬ್ಬರೂ ಅವತಾರ ಪುರುಷರಾಗಿದ್ದರು ಎಂದು ಹೇಳಿದರು.
ಮೈಗೂರಿನ ಶಿವಾನಂದಮಠದ ಗುರುಪ್ರಸಾದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಪತ್ತು ಉಪ್ಪುನೀರಿನಂತಿದ್ದರೆ, ಜ್ಞಾನ ಸಿಹಿನೀರಿನಂತೆ. ಜ್ಞಾನವು ಮನುಷ್ಯನನ್ನು ಬದುಕಿನ ದಡ ಸೇರಿಸುತ್ತದೆ. ಆದ್ದರಿಂದ ಸಿದ್ಧೇಶ್ವರ ಶ್ರೀಗಳ ಪ್ರವಚನದ ಪ್ರತಿಯೊಂದು ಮಾತು ಮಂತ್ರದಂತಿರುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ತ್ಯಾಗಿಗಳು, ಯೋಗಿಗಳು ಹಾಗೂ ಜ್ಞಾನಿಗಳಾಗಿದ್ದ ಮಲ್ಲಿಕಾರ್ಜುನ ಶಿವಯೋಗಿಗಳು ಮತ್ತು ಸಿದ್ಧೇಶ್ವರ ಶ್ರೀಗಳು ಭೂಮಿ, ಗಾಳಿ, ನೀರು ಹಾಗೂ ಆಕಾಶ ಇರುವವರೆಗೂ ಜನಮಾನಸದಲ್ಲಿ ಜೀವಂತವಾಗಿರುತ್ತಾರೆ. ಮಣ್ಣಿನಲ್ಲಿ ನಡೆಯುವಾಗಲೂ ನಮ್ಮೊಂದಿಗೆ ಮಾತನಾಡುವ ಅನುಭೂತಿ ಅವರ ಸ್ಮರಣೆಯಿಂದ ದೊರೆಯುತ್ತದೆ ಎಂದು ಹೇಳಿದರು.
ಋಷಿಕೇಶದ ಗಂಗಾಧರಾನಂದ ಶ್ರೀಗಳು ಹಾಗೂ ಸಿದ್ದಾಪುರದ ಅಡವಿಸಿದ್ಧೇಶ್ವರ ಮಠದ ಮಾತೋಶ್ರೀ ಮಹಾದೇವಿ ಅಕ್ಕನವರು ಸಾನ್ನಿಧ್ಯ ವಹಿಸಿದ್ದರು. ಹಿರಿಯ ವಕೀಲ ಎನ್.ಎಸ್. ದೇವರವರ ಮಾತನಾಡಿದರು. ವಿಶೇಷ ಸಾಧಕರ ಪರವಾಗಿ ಸನ್ಮಾನಿತರಾದ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ ಮಾತನಾಡಿದರು.
ವಿಧಾನ ಪರಿಷತ್ತಿನ ಮಾಜಿ ಶಾಸಕ ಜಿ.ಎಸ್. ನ್ಯಾಮಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಏಗಪ್ಪ ಸವದಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ, ಮೈಗೂರಿನ ಬಿ.ಜಿ. ಪಾಟೀಲ, ಎಂ.ಡಿ. ತೆಲಸಂಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸಗೌಡ ಪಾಟೀಲ, ಪರಮೇಶ್ವರ ತೇಲಿ, ರಾಮಚಂದ್ರ ಹೂಗಾರ, ಸಿದ್ದು ಉಪ್ಪಲದಿನ್ನಿ ಹಾಗೂ ಸಿದ್ದಪ್ಪ ಕರಿಗಾರ ಸಂಗೀತ ಸೇವೆ ಸಲ್ಲಿಸಿದರು. ಪ್ರೊ. ಬಸವರಾಜ ಕಡ್ಡಿ ಸ್ವರಚಿತ ವಚನ ವಾಚನದ ಮೂಲಕ ಗುರುಸ್ಮರಣೆ ಸಲ್ಲಿಸಿದರು.
ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ದಾಂಡೇಲಿಯ ಸಾತಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಸಂಗಮೇಶ ತೆಲಸಂಗ ಕಾರ್ಯಕ್ರಮ ನಿರೂಪಿಸಿದರು.
Leave a Reply