ಆರಾಧನಾ ಶಾಲೆಯಲ್ಲಿ ‘ಮಕ್ಕಳ ರಕ್ಷಣಾ ನೀತಿ ಹಾಗೂ ಕಾನೂನು ಅರಿವು’ ಕಾರ್ಯಕ್ರಮ

Posted by

ಸುದ್ದಿ ಬೆಳಕು ವಾರ್ತೆ

ಗುರುಮಠಕಲ್: ಸ್ಥಳೀಯ ಆರಾಧನಾ ಪಬ್ಲಿಕ್ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ‘ಮಕ್ಕಳ ರಕ್ಷಣಾ ನೀತಿ 2016 (2023) ಹಾಗೂ ಮಕ್ಕಳ ಹಕ್ಕುಗಳು ಮತ್ತು ಕಾಯ್ದೆ-ಕಾನೂನುಗಳ ಕುರಿತು ಅರಿವು ಕಾರ್ಯಕ್ರಮ’ವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿ ಶ್ರೀ ಮರಿಯಪ್ಪ ಅವರು, “ಮಕ್ಕಳಿಗೆ ಜೀವಿಸುವ, ರಕ್ಷಣೆಯ, ಅಭಿವೃದ್ಧಿ ಹೊಂದುವ ಹಾಗೂ ಭಾಗವಹಿಸುವ ನಾಲ್ಕು ಮೂಲಭೂತ ಹಕ್ಕುಗಳಿವೆ. ಪ್ರತಿಯೊಂದು ಮಗೂ ಕೂಡ ಗೌರವದಿಂದ ಬದುಕುವ ಮೂಲಕ ತಮ್ಮ ಭವಿಷ್ಯವನ್ನು ಸಮೃದ್ಧಗೊಳಿಸಿಕೊಳ್ಳಬೇಕು” ಎಂದರು.

ಮುಂದುವರಿದು ಮಾತನಾಡಿದ ಅವರು, “6ರಿಂದ 14 ವರ್ಷದೊಳಗಿನ ಪ್ರತಿಯೊಂದು ಮಗುವೂ ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕು. ಬಾಲಕಾರ್ಮಿಕ ನಿಷೇಧ ಕಾಯ್ದೆ 1986ರ ಪ್ರಕಾರ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸುವುದು ಅಪರಾಧ. 14ರಿಂದ 18 ವರ್ಷದೊಳಗಿನವರನ್ನು ಅಪಾಯಕಾರಿ ಸ್ಥಳಗಳಲ್ಲಿ ಕೆಲಸಕ್ಕೆ ತೊಡಗಿಸಬಾರದು. ಸೈಕಲ್ ಮೋಟಾರ್ (ಬೈಕ್) ಚಾಲನೆ ಮಾಡಲು 18 ವರ್ಷ ಪೂರ್ಣಗೊಳ್ಳುವುದು ಕಡ್ಡಾಯ. ಅಪ್ರಾಪ್ತರು ಬೈಕ್ ಚಾಲನೆ ಮಾಡಿದರೆ ರೂ. 25,000 ವರೆಗೆ ದಂಡ ವಿಧಿಸಲಾಗುತ್ತದೆ,” ಎಂದು ಎಚ್ಚರಿಸಿದರು.

“ವಿದ್ಯಾರ್ಥಿಗಳು ಪ್ರೀತಿ-ಪ್ರೇಮ ಎಂಬ ಆಕರ್ಷಣೆಗೆ ಒಳಗಾಗದೆ ತಂದೆ-ತಾಯಿ ಹಾಗೂ ಶಾಲೆಗೆ ಕೀರ್ತಿ ತರುವ ರೀತಿಯಲ್ಲಿ ಸಾಧನೆ ಮಾಡಬೇಕು. ಪೋಕ್ಸೋ (POCSO) ಕಾಯ್ದೆಯಡಿ ಅಪರಾಧ ಎಸಗುವ ವ್ಯಕ್ತಿಗೆ ಜಾಮೀನು ರಹಿತ ಕನಿಷ್ಠ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಬಾಲ ನ್ಯಾಯ ಕಾಯ್ದೆ 2015ರ ನಿಯಮಗಳನ್ನು ಗೌರವಿಸಿ, ಸತ್ಸಂಗ ಮತ್ತು ಉತ್ತಮ ವರ್ತನೆಯೊಂದಿಗೆ ಮಾದರಿ ನಾಗರಿಕರಾಗಬೇಕು,” ಎಂದು ಕರೆ ನೀಡಿದರು.

ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಕುರಿತು ಮಾಹಿತಿ ನೀಡಿದ ಶ್ರೀಮತಿ ಗಂಗಬಾಯಿ ಪತ್ತಾರ, “ಬಾಲ್ಯ ವಿವಾಹದಿಂದ ಮಕ್ಕಳ ಭವಿಷ್ಯ ಹಾಳಾಗುವುದಲ್ಲದೆ, ಹೆರಿಗೆ ಸಮಯದಲ್ಲಿ ತಾಯಿ-ಮಗುವಿನ ಮರಣ, ಅಂಗವೈಕಲ್ಯ ಹಾಗೂ ಮಾನಸಿಕ-ದೈಹಿಕ ಸಮಸ್ಯೆಗಳು ಎದುರಾಗುತ್ತವೆ. ಬಾಲ್ಯ ವಿವಾಹಕ್ಕೆ ಕಾರಣರಾದವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ,” ಎಂದರು.

ಮಕ್ಕಳ ಸಹಾಯವಾಣಿ (1098) ಕುರಿತು ಮಾತನಾಡಿದ ಕುಮಾರಿ ಮಂಜಮ್ಮ, “ದಿನದ 24 ಗಂಟೆಯೂ ಕಾರ್ಯಾಚರಿಸುವ ಸಹಾಯವಾಣಿಗೆ ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ, ಬಿಕ್ಷಾಟನೆ, ಕಾಣೆಯಾದ ಅಥವಾ ಅನಾಥ ಮಕ್ಕಳ ಬಗ್ಗೆ ತಕ್ಷಣ ಮಾಹಿತಿ ನೀಡಬಹುದು. ಅಧಿಕಾರಿಗಳು ಅಂತಹ ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಲಿದ್ದಾರೆ,” ಎಂದು ತಿಳಿಸಿದರು.

ಆರಾಧನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ರಾವಣಿ ವೇಣುಗೋಪಾಲಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, “ಮಕ್ಕಳಿಗೆ ಬಡತನಕ್ಕಿಂತ ಸಂಸ್ಕೃತಿ ಮತ್ತು ಸನ್ಮೌಲ್ಯಗಳು ಅತ್ಯಂತ ಮುಖ್ಯ. ತಂದೆ-ತಾಯಿಯ ನಂಬಿಕೆಯನ್ನು ಉಳಿಸಿಕೊಂಡು ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ಶಿಕ್ಷಣ ಪಡೆಯಬೇಕು,” ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ LADC ವಕೀಲರಾದ ಶ್ರೀಮತಿ ಸುಷ್ಮಾ ಜಾದವ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಶ್ರೀಮತಿ ಜಯಶ್ರೀ ಗಾಂಜಿ, BRP ಶ್ರೀ ಬಾಲಪ್ಪ, ಶಾಲೆಯ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku