
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಚಿರತೆ ದಾಳಿಗೆ ಎಮ್ಮೆ ಕರು ಬಲಿಯಾದ ಘಟನೆ ಗ್ರಾಮಸ್ಥರಲ್ಲಿ ಭೀತಿ ಉಂಟುಮಾಡಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪಿಸಿದ್ದಾರೆ.
ಗ್ರಾಮದ ರೈತ ಆಂಜನೇಯ ತಂ. ಬುಗ್ಗಪ್ಪ ಬಾಗ್ಲಿ ಅವರ ಜಮೀನಿನಲ್ಲಿ ಮೇಯುತ್ತಿದ್ದ ಎಮ್ಮೆ ಕರುವನ್ನು ರವಿವಾರ ಬೆಳಿಗ್ಗೆ ಚಿರತೆ ಎಳೆದುಕೊಂಡು ಹೋಗಿ ಗವಿಯಲ್ಲಿ ತಿಂದು ಹಾಕಿರುವ ಘಟನೆ ನಡೆದಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ಘಟನೆಯ ಮಾಹಿತಿ ತಿಳಿದ ತಕ್ಷಣ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿರತೆ ಜಮೀನಿನುದ್ದಕ್ಕೂ ಕರುವನ್ನು ಎಳೆದುಕೊಂಡು ಹೋಗಿ ತಿಂದು ಹಾಕಿದ ಸ್ಥಳವನ್ನು ವೀಕ್ಷಿಸಿ ಅರಣ್ಯ ಇಲಾಖೆ ಹಾಗೂ ಪಶು ವೈದ್ಯಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಕಳೆದ ತಿಂಗಳಲ್ಲಿ ಮಸಕನಹಳ್ಳಿ, ಮುಂಡರಗಿ, ಅಲ್ಲಿಪೂರ, ಹತ್ತಿಕುಣಿ ಹಾಗೂ ಬಳಿಚಕ್ರ ಗ್ರಾಮಗಳಲ್ಲೂ ಚಿರತೆ ದಾಳಿ ನಡೆದಿರುವುದನ್ನು ಅವರು ನೆನಪಿಸಿದರು.
ಜಿಲ್ಲಾಡಳಿತ ವಿರುದ್ಧ ಆಕ್ರೋಶ
“ಮಳೆಗಾಲ ಆರಂಭವಾಗಿರುವುದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಭದ್ರತೆ ಒದಗಿಸಬೇಕಿತ್ತು. ಜಿಲ್ಲಾಡಳಿತ ಮೊದಲೇ ಎಚ್ಚೆತ್ತುಕೊಂಡಿದ್ದರೆ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ. ಆಡಳಿತದ ನಿರ್ಲಕ್ಷ್ಯವೇ ಈ ಘಟನೆಯ ಪ್ರಮುಖ ಕಾರಣ” ಎಂದು ಉಮೇಶ ಮುದ್ನಾಳ್ ಆರೋಪಿಸಿದರು.
ಬೋನು, ಸಿಸಿ ಕ್ಯಾಮರಾ ಅಳವಡಿಕೆಗೆ ಒತ್ತಾಯ
ಚಿರತೆಯನ್ನು ತಕ್ಷಣ ಸೆರೆಹಿಡಿದು ಬೇರೆಡೆ ಸ್ಥಳಾಂತರ ಮಾಡಬೇಕು. ಹೆಚ್ಚಿನ ಬೋನುಗಳು ಹಾಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಹಿರಿಯ ಅಧಿಕಾರಿಗಳ ತಂಡ ರಚಿಸಿ ರೈತರು ಮತ್ತು ಸಾರ್ವಜನಿಕರಿಗೆ ಭದ್ರತೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ರೈತರಿಗೆ ಎಚ್ಚರಿಕೆ
ಈ ವೇಳೆ ರೈತರಿಗೆ ಎಚ್ಚರಿಕೆ ನೀಡಿದ ಉಮೇಶ ಮುದ್ನಾಳ್, “ಒಬ್ಬೊಬ್ಬರಾಗಿ ಜಮೀನಿಗೆ ತೆರಳಬೇಡಿ. ಜಾನುವಾರುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಚ್ಚರಿಕೆಯಿಂದ ಇರಬೇಕು” ಎಂದು ಸಲಹೆ ನೀಡಿದರು.
ಪರಿಹಾರ ನೀಡದಿದ್ದರೆ ಹೋರಾಟ ಎಚ್ಚರಿಕೆ
ಚಿರತೆ ದಾಳಿಗೆ ಬಲಿಯಾದ ಎಮ್ಮೆ ಕರುವಿನ ಮಾಲಿಕ ಆಂಜನೇಯ ತಂ. ಬುಗ್ಗಪ್ಪ ಬಾಗ್ಲಿ ಅವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಚಿರತೆಯನ್ನು ಸೆರೆಹಿಡಿಯದಿದ್ದರೆ ಯಾದಗಿರಿ–ಹೈದರಾಬಾದ್ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹಣಮಂತ ಗುಜರಾತ್, ವಿಶ್ವನಾಥ, ಭೀಮಾಶಂಕರ್, ಸಾಬಣ್ಣ, ಮುಕೇಶ್, ರಮೇಶ್, ಪ್ರಭು, ರವಿ, ಮೊನೇಶ್, ಪವನ, ಬಸವರಾಜ್, ಗುರಪ್ಪ, ಮಲ್ಲಪ್ಪ, ಹಂಜಪ್ಪ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.











Leave a Reply