
ಯಾದಗಿರಿ: ಬೇಸಿಗೆ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ನಿಂಬೆಹಣ್ಣಿನ ಬೆಲೆ ಗಗನಕ್ಕೇರಿದ್ದು, ವ್ಯಾಪಾರಸ್ಥರು ಹಾಗೂ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ಕಳೆದ ತಿಂಗಳು 5 ರೂ.ಗೆ ದೊರೆಯುತ್ತಿದ್ದ ಒಂದು ನಿಂಬೆಹಣ್ಣು ಇದೀಗ 10ರಿಂದ 15 ರೂ.ವರೆಗೆ ಏರಿಕೆಯಾಗಿದೆ. ಇದರಿಂದ ಖರೀದಿದಾರರು ಹಿಂಜರಿಯುತ್ತಿದ್ದು, ವ್ಯಾಪಾರದಲ್ಲಿ ಮಂದಗತಿ ಕಂಡುಬರುತ್ತಿದೆ.
ಸ್ಥಳೀಯ ವ್ಯಾಪಾರಸ್ಥರು ಕಲಬುರಗಿಯ ಸುಲ್ತಾನಪುರ ಮಾರುಕಟ್ಟೆಯಿಂದ ಒಂದು ಚೀಲ ನಿಂಬೆಹಣ್ಣು ಸುಮಾರು 9 ಸಾವಿರ ರೂ.ಗೆ ಖರೀದಿ ಮಾಡುತ್ತಿದ್ದಾರೆ. ಒಂದು ಚೀಲದಲ್ಲಿ ಸುಮಾರು 1000 ಹಣ್ಣುಗಳಿದ್ದರೂ, ಕೆಲವು ಹಣ್ಣುಗಳು ಪರಿಪಕ್ವವಾಗಿರದ ಕಾರಣ ಗ್ರಾಹಕರು ಖರೀದಿ ಮಾಡಲು ಮುಂದಾಗುತ್ತಿಲ್ಲ ಎಂದು ವ್ಯಾಪಾರಿ ಅಬ್ದುಲ್ ಸಲೀಂ ತಿಳಿಸಿದ್ದಾರೆ.
ದರ ಏರಿಕೆಯಿಂದಾಗಿ 100 ನಿಂಬೆಹಣ್ಣುಗಳನ್ನು ಸುಮಾರು 1300 ರೂ.ಗೆ ಮಾರಾಟ ಮಾಡಬೇಕಾಗಿರುವ ಪರಿಸ್ಥಿತಿ ಎದುರಾಗಿದೆ. ಗ್ರಾಹಕರು ಬೆಲೆ ಕೇಳಿ ಖರೀದಿ ಮಾಡದೇ ಹಿಂದಿರುಗುತ್ತಿರುವುದರಿಂದ ನಷ್ಟ ಅನುಭವಿಸುತ್ತಿದ್ದೇವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ನಿಂಬೆಹಣ್ಣು ಬಳಕೆ ಅಗತ್ಯವಿದ್ದರೂ, ಹೆಚ್ಚಿದ ದರದಿಂದ ಬೇಡಿಕೆ ಕುಸಿದಿದೆ. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಹ ನಿಂಬೆಹಣ್ಣಿನ ಬದಲು ಉಳ್ಳಾಗಡ್ಡಿ ಮತ್ತು ಮೆಣಸಿನಕಾಯಿ ನೀಡಲಾಗುತ್ತಿದೆ.
ಈ ವರ್ಷ ಅತಿವೃಷ್ಟಿ ಮತ್ತು ಆಲೆಕಲ್ಲು ಮಳೆಯಿಂದ ಇಳುವರಿ ಕುಂಠಿತಗೊಂಡಿರುವುದೇ ದರ ಏರಿಕೆಗೆ ಪ್ರಮುಖ ಕಾರಣ ಎಂದು ಬೆಳೆಗಾರರು ತಿಳಿಸಿದ್ದಾರೆ. ಮಹಾರಾಷ್ಟ್ರ ಹಾಗೂ ವಿಜಯಪುರ ಭಾಗಗಳಲ್ಲಿ ಹೆಚ್ಚಿನ ಉತ್ಪಾದನೆ ಇರುವುದರಿಂದ ಅಲ್ಲಿ ಬೆಳೆ ಹಾನಿಯ ಪರಿಣಾಮವೂ ಬೆಲೆಯಲ್ಲಿ ಕಾಣುತ್ತಿದೆ.
ಇತ್ತ ಗ್ರಾಹಕರು ಹೆಚ್ಚಿದ ದರದಿಂದ ನಿಂಬೆಹಣ್ಣು ಬಳಕೆಯನ್ನು ಕಡಿಮೆ ಮಾಡಿದ್ದು, ಕಲ್ಲಂಗಡಿ ಹಣ್ಣು ಹಾಗೂ ಮಜ್ಜಿಗೆ ಸೇವನೆಗೆ ಒಲವು ತೋರುತ್ತಿದ್ದಾರೆ. ದರ ಇದೇ ರೀತಿ ಮುಂದುವರಿದರೆ ಖರೀದಿ ಕಷ್ಟವಾಗುತ್ತದೆ ಎಂದು ರೈತ ರಾಮರೆಡ್ಡಿ ಮಾಲಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.










Leave a Reply