
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಜಿಲ್ಲೆಯ ಯರಗೋಳ ಗ್ರಾಮದಲ್ಲಿ ಕನ್ನಡಾಭಿಮಾನವನ್ನು ವಿಶಿಷ್ಟವಾಗಿ ಅಭಿವ್ಯಕ್ತಿಸಿದ ಘಟನೆ ಎಲ್ಲರ ಗಮನ ಸೆಳೆದಿದೆ. ಮಾನೇಗಾರ ಕುಟುಂಬವು ತಮ್ಮ ಮನೆಯ ವಿವಾಹ ಆಮಂತ್ರಣ ಪತ್ರಿಕೆಯನ್ನು ಕರ್ನಾಟಕ ನಕ್ಷೆ ವಿನ್ಯಾಸದಲ್ಲಿ ಮುದ್ರಿಸಿ, ನಾಡು-ನುಡಿಯ ಮೇಲಿನ ತಮ್ಮ ಪ್ರೀತಿಯನ್ನು ಸೊಗಸಾಗಿ ಪ್ರದರ್ಶಿಸಿದೆ.
ಗ್ರಾಮದ ಕಾಶಮ್ಮ–ಬಸವರಾಜ ಮಾನೇಗಾರ ದಂಪತಿಯ ತೃತೀಯ ಪುತ್ರ ರಮೇಶ್ ಅವರ ವಿವಾಹವು, ಅನ್ನಮ್ಮ–ವಜ್ರಕಾಂತ ಬೆಳಗುಂದಿ ದಂಪತಿಯ ಪುತ್ರಿ ಸುಧಾ ಅವರೊಂದಿಗೆ ನಿಶ್ಚಯಗೊಂಡಿದೆ. ಮೇ ೪ರಂದು ಯರಗೋಳ ಗ್ರಾಮದಲ್ಲೇ ಈ ವಿವಾಹ ಸಮಾರಂಭ ನಡೆಯಲಿದ್ದು, ಅದರ ನಿಮಿತ್ತ ಮುದ್ರಿಸಲಾದ ವಿಶೇಷ ಆಮಂತ್ರಣ ಪತ್ರಿಕೆ ಈಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ನಾಲ್ಕು ಪುಟಗಳ ಈ ಆಮಂತ್ರಣ ಪತ್ರಿಕೆಯಲ್ಲಿ ಕರ್ನಾಟಕ ನಕ್ಷೆಯ ಆಕರ್ಷಕ ವಿನ್ಯಾಸವನ್ನು ಬಳಸಲಾಗಿದೆ. ಮೊದಲ ಪುಟದಲ್ಲಿ ಗಣೇಶನ ಭಾವಚಿತ್ರ, ಕನ್ನಡ ತಾಯಿ ಭುವನೇಶ್ವರಿ ಮೂರ್ತಿ ಹಾಗೂ ಹಂಪಿಯ ಕಲ್ಲಿನ ರಥದ ಚಿತ್ರಣ ಮನಸೆಳೆಯುವಂತಿದೆ. ಬಣ್ಣ ವಿನ್ಯಾಸವೂ ಕನ್ನಡದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವಂತೆ ರೂಪಿಸಲಾಗಿದೆ.
ಈ ಕುಟುಂಬದ ಕನ್ನಡಾಭಿಮಾನ ಹೊಸದಲ್ಲ. ವಿವಿಧ ಕಾರ್ಯಕ್ರಮಗಳಿಗೆ ತೆರಳುವಾಗ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ ಹೊಂದಿದ ಫಲಕಗಳನ್ನು ನೀಡುವ ಮೂಲಕ ಶುಭಾಶಯ ಕೋರುವ ಪರಂಪರೆ ಇವರದು. ಮದುಮಗನ ಸಹೋದರ ಶಿವರಾಜ ಮಾನೇಗಾರ, ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿಯ ಅಧ್ಯಕ್ಷರಾಗಿದ್ದು, ಈ ಎಲ್ಲಾ ಚಟುವಟಿಕೆಗಳಿಗೆ ಮುಂಚೂಣಿಯಾಗಿದ್ದಾರೆ.
ಶಿವರಾಜ ಅವರ ನೇತೃತ್ವದಲ್ಲಿ ಗ್ರಾಮದ ಮುಖ್ಯರಸ್ತೆ ಪಕ್ಕದಲ್ಲಿ ಕನ್ನಡ ತಾಯಿ ಭುವನೇಶ್ವರಿ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಪ್ರತಿದಿನ ಬೆಳಿಗ್ಗೆ ಪೂಜೆ ಸಲ್ಲಿಸುವ ಪರಂಪರೆ ಮುಂದುವರಿದಿದೆ. ಜೊತೆಗೆ ಪ್ರತಿವರ್ಷ ‘ಯರಗೋಳ ಕನ್ನಡಿಗರ ವೈಭವ’ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗುತ್ತದೆ.
“ಕನ್ನಡ ನಮ್ಮ ಉಸಿರು. ನಾಡಿನ ನೆಲ, ಜಲ, ಭಾಷೆಯ ಬಗ್ಗೆ ಅಪಾರ ಹೆಮ್ಮೆ ಇದೆ. ಕನ್ನಡ ಜಾಗೃತಿ ಮೂಡಿಸಲು ತಮ್ಮನ ಮದುವೆ ಆಮಂತ್ರಣವನ್ನು ಕರ್ನಾಟಕ ನಕ್ಷೆ ವಿನ್ಯಾಸದಲ್ಲಿ ಮುದ್ರಿಸಿದ್ದೇವೆ,” ಎಂದು ಶಿವರಾಜ ಮಾನೇಗಾರ ಹೇಳಿದ್ದಾರೆ.
ಕನ್ನಡದ ಮೇಲಿನ ಪ್ರೀತಿ ಮತ್ತು ಬದ್ಧತೆಯನ್ನು ವಿಭಿನ್ನ ರೀತಿಯಲ್ಲಿ ಪ್ರದರ್ಶಿಸಿರುವ ಮಾನೇಗಾರ ಕುಟುಂಬದ ಈ ಹೊಸ ಪ್ರಯತ್ನಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.










Leave a Reply