ಶಹಾಪುರದಲ್ಲಿ ಕನಕದಾಸರ ಭಕ್ತಿತತ್ವ ಕುರಿತು ವಿಶೇಷ ಉಪನ್ಯಾಸ

Posted by

ಸುದ್ದಿ ಬೆಳಕು ವಾರ್ತೆ

ಶಹಾಪುರ: ಕನಕದಾಸರು ಕೇವಲ ಭಕ್ತ ಕವಿ ಮಾತ್ರವಲ್ಲ, ಸಮಾಜ ಸುಧಾರಕ, ಮಾನವತಾವಾದಿ ಹಾಗೂ ಸಮಾನತೆಯ ಹರಿಕಾರರಾಗಿದ್ದಾರೆ. ಕನಕದಾಸರ ಸಾಹಿತ್ಯವು ಭಕ್ತಿ, ಜ್ಞಾನ, ವೈರಾಗ್ಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಸಮನ್ವಯವಾಗಿದೆ ಎಂದು ಜ್ಞಾನ ಮೃತ ಸೇವಾ ಶಿಕ್ಷಣ ಸಂಸ್ಥೆಯ ಯಾಗಾಚಾರ್ಯ ನರಸಿಂಹ ವೈದ್ಯ ಹೇಳಿದರು.

ಶಹಾಪುರ ನಗರದ ಜ್ಞಾನಮೃತ ಸೇವಾ ಶಿಕ್ಷಣ ಟ್ರಸ್ಟ್ (ರಿ) ಯೋಗಧಾಮ ವಿದ್ಯಾನಗರದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಕಾಗಿನೆಲೆ ಮತ್ತು ಜ್ಯೋತಿರ್ಗಮಯ ಸೇವಾ ಸಂಸ್ಥೆಯ ಸಗಯೋಗದಲ್ಲಿ ನಡೆದ ಕನಕದಾಸರ ಭಕ್ತಿತತ್ವ ಮತ್ತು ಹರಿದಾಸ ಪರಂಪರೆ ಕುರಿತು ಕನಕ ದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಕೀಲ ಆರ್.ಹೊನ್ನಾರೆಡ್ಡಿ ಉಪನ್ಯಾಸ ನೀಡಿ ಮಾತನಾಡಿದ ಅವರು ಕನಕದಾಸರು ಸಮಾಜದಲ್ಲಿ ಜಾತಿ-ಮತಗಳ ಬೇಧಭಾವ ಹೆಚ್ಚಾಗಿದ್ದ ಕಾಲಘಟ್ಟದಲ್ಲಿಯೇ ಕನಕದಾಸರು ತಮ್ಮ ಕೀರ್ತನೆಗಳು ಮತ್ತು ಕಾವ್ಯಗಳ ಮೂಲಕ ಸಮಾನತೆಯ ಸಂದೇಶವನ್ನು ಸಾರಿದರು.

ಭಗವಂತನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬ ತತ್ವವನ್ನು ತಮ್ಮ ಬದುಕಿನಲ್ಲಿಯೂ ಸಾಹಿತ್ಯದಲ್ಲಿಯೂ ಪ್ರತಿಪಾದಿಸಿದರು ಎಂದು ವಿವರಿಸಿದರು. ಹರಿದಾಸ ಪರಂಪರೆಯು ಕರ್ನಾಟಕದ ಭಕ್ತಿ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಜನಸಾಮಾನ್ಯರಿಗೆ ಭಗವಂತನ ಭಕ್ತಿ, ಸದಾಚಾರ, ನೈತಿಕತೆ ಹಾಗೂ ಉತ್ತಮಜೀವನ ಮೌಲ್ಯಗಳನ್ನು ಸುಲಭವಾಗಿ ತಲುಪಿಸಿದ ಪರಂಪರೆಯಾಗಿದೆ. ಈ ಪರಂಪರೆಯಲ್ಲಿ ಶ್ರೀಪಾದರಾಜರು, ವ್ಯಾಸರಾಯರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಜಗನ್ನಾಥದಾಸರು ಸೇರಿದಂತೆ ಅನೇಕ ಹರಿದಾಸರು ಕನ್ನಡ ಸಾಹಿತ್ಯ ಮತ್ತು ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕೀರ್ತನೆಗಳು ಇಂದಿಗೂ ದೇವಾಲಯಗಳಲ್ಲಿ, ಭಜನಾ ಮಂದಿರಗಳಲ್ಲಿ ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ಭಕ್ತಿಭಾವವನ್ನು ಮೂಡಿಸುತ್ತಿವೆ ಎಂದು ತಿಳಿಸಿದರು.

ಯೋಗ ಶಿಕ್ಷಕಿ ಪ್ರತಿ ಭಾಗಿಂಡಿ ಮಾತನಾಡಿ ಕನಕದಾಸರ ಸಾಹಿತ್ಯದಲ್ಲಿ ಕಂಡುಬರುವ ಸಾಮಾಜಿಕ ಕಾಳಜಿ ಇಂದಿನ ಸಮಾಜಕ್ಕೂ ಮಾರ್ಗದರ್ಶನವಾಗಿದೆ. ಅವರ ‘ರಾಮಧಾನ್ಯ ಚರಿತ್ರೆ’ ಕೃತಿಯ ಮೂಲಕ ಸಮಾಜದಲ್ಲಿನ ಮೇಲು-ಕೀಳು ಭಾವನೆಯನ್ನು ಖಂಡಿಸಿ, ಪ್ರತಿಯೊಬ್ಬ ವ್ಯಕ್ತಿಯ ಗೌರವವನ್ನು ಎತ್ತಿ ಹಿಡಿದಿದ್ದಾರೆ. ‘ಹರಿಭಕ್ತಿಸಾರ’ ‘ನಳಚರಿತ್ರೆ’ ಹಾಗೂ ‘ಮೋಹನತ ರಂಗಿಣಿ’ ಕೃತಿಗಳ ಮೂಲಕ ಭಕ್ತಿ, ಧರ್ಮ, ಮಾನವೀಯತೆ ಮತ್ತುಜೀವನ ಮೌಲ್ಯಗಳನ್ನು ಜನರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಬೋಧಿಸಿದ್ದಾರೆ ಎಂದು ಹೇಳಿದರು.

ಯೋಗ ಶಿಕ್ಷಕ ದೇವರೆಡ್ಡಿ ಮಾತನಾಡಿ ಉಡುಪಿಯ ಕನಕನ ಕಿಂಡಿಯ ಪ್ರಸಂಗವು ಕನಕದಾಸರ ಅಚಲ ಭಕ್ತಿ, ವಿನಯ ಮತ್ತುದೇವರ ಮೇಲಿನ ಅಪಾರ ನಂಬಿಕೆಗೆ ಸಾಕ್ಷಿಯಾಗಿದೆ. ದೇವರು ಭಕ್ತನ ಭಕ್ತಿಗೆ ಮಾತ್ರ ಮನ್ನಣೆ ನೀಡುತ್ತಾನೆ, ಜಾತಿ ಅಥವಾ ವರ್ಣಕ್ಕೆ ಅಲ್ಲ ಎಂಬ ಸಂದೇಶವನ್ನು ಈ ಘಟನೆಯು ಸಾರುತ್ತದೆ. ಇದೇ ಕನಕದಾಸರ ಭಕ್ತಿತತ್ವದ ಮೂಲ ಆಶಯವಾಗಿದೆ ಎಂದು ಉಪನ್ಯಾಸಕರು ತಿಳಿಸಿದರು.

ಜ್ಯೋತಿರ್ಗಮಯ ಸಂಸ್ಥೆಯ ಅಧ್ಯಕ್ಷ ಮಹೇಶ ಪತ್ತಾರ ಮಾತನಾಡಿ ಯುವಜನತೆ ಕನಕದಾಸರ ಸಾಹಿತ್ಯವನ್ನು ಓದಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತ್ಯ, ಪ್ರಾಮಾಣಿಕತೆ, ಮಾನವೀಯತೆ, ಸಹಿಷ್ಣುತೆ ಹಾಗೂ ಸಾಮಾಜಿಕ ಜವಾಬ್ದಾರಿಯಂತಹ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಕನಕದಾಸರ ಚಿಂತನೆಗಳು ಇಂದಿನ ಶಿಕ್ಷಣ ವ್ಯವಸ್ಥೆ, ಸಾಮಾಜಿಕ ಬದುಕು ಹಾಗೂ ರಾಷ್ಟ್ರೀಯ ಏಕತೆಗೆ ಅತ್ಯಂತ ಪ್ರಸ್ತುತವಾಗಿವೆ ಎಂದು ಅವರು ಅಭಿಪ್ರಾಯ ಪಟ್ಟರು.

ಯೋಗ ಶಿಕ್ಷಕ ವಿರೇಶ ಉಳ್ಳಿ ನಿರೂಪಿಸಿದರು. ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಪ್ರಾರ್ಥಿಸಿದರು. ಸಂಗನಗೌಡ ಪಾಟೀಲ್ ವಂದಿಸಿದರು.

Leave a Reply

Your email address will not be published. Required fields are marked *

Suddi Belaku