ಕಲಬುರಗಿಯಲ್ಲಿ ‘ಬಸವಾದಿ ಶಿವಶರಣರ ಬೃಹತ್ ಸಮಾವೇಶ’: ಹಡಪದ ಅಪ್ಪಣ್ಣ ಸಮಾಜದ ನಿಲುವು ಸ್ಪಷ್ಟ

Posted by

–

ಸುದ್ದಿ ಬೆಳಕು ವಾರ್ತೆ

ಕಲಬುರಗಿ : ಮಹಾರಾಷ್ಟ್ರದ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಸೆ.27ರಂದು ನಗರದ ನೂತನ ವಿದ್ಯಾಲಯ ಮೈದಾನ (ಎಸ್.ವಿ. ಶರಣಬಸವೇಶ್ವರ ಮೈದಾನ)ದಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ **‘ಬಸವಾದಿ ಶಿವಶರಣರ ಬೃಹತ್ ಸಮಾವೇಶ’**ಕ್ಕೆ ಸಂಬಂಧಿಸಿದಂತೆ ವಿವಿಧ ವಲಯಗಳಲ್ಲಿ ವ್ಯಕ್ತವಾಗಿರುವ ಭಿನ್ನಾಭಿಪ್ರಾಯಗಳ ಕುರಿತು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಯಕ ಸಮಾಜಗಳ ಒಕ್ಕೂಟದ ರಾಜ್ಯಾಧ್ಯಕ್ಷ ಭೀಮಣ್ಣ ಬೋನಾಳ ಅವರು ಪತ್ರಿಕಾ ಹೇಳಿಕೆಯಲ್ಲಿ ಸಣ್ಣ ಸಮುದಾಯಗಳ ಹೆಸರಿನೊಂದಿಗೆ ಹಡಪದ ಅಪ್ಪಣ್ಣ ಸಮಾಜದ ಹೆಸರನ್ನೂ ಉಲ್ಲೇಖಿಸಿ ಕನ್ನೇರಿ ಶ್ರೀಗಳ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದು ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಮುಖಂಡರು ತಿಳಿಸಿದ್ದಾರೆ.

ಹಡಪದ ಅಪ್ಪಣ್ಣ ಸಮಾಜದ ಒಪ್ಪಿಗೆ ಅಥವಾ ನಿರ್ಣಯವಿಲ್ಲದೆ ಸಮಾಜದ ಹೆಸರನ್ನು ಯಾವುದೇ ವಿಚಾರದಲ್ಲಿ ಬಳಸುವುದು ಸೂಕ್ತವಲ್ಲ. ವೈಯಕ್ತಿಕ ಸ್ವಾರ್ಥ, ರಾಜಕೀಯ ಉದ್ದೇಶ ಅಥವಾ ಪ್ರಚಾರಕ್ಕಾಗಿ ಸಮಾಜದ ಹೆಸರನ್ನು ಬಳಸಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಸವಾದಿ ಶಿವಶರಣರ ತತ್ವ, ವಚನ ಸಾಹಿತ್ಯ, ಕಾಯಕ–ದಾಸೋಹದ ಸಂದೇಶ ಹಾಗೂ ಸಮಾನತೆಯ ವಿಚಾರಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಹಡಪದ ಅಪ್ಪಣ್ಣ ಸಮಾಜದ ಬೆಂಬಲವಿದೆ ಎಂದು ಜಿಲ್ಲಾ ಘಟಕದ ಪದಾಧಿಕಾರಿಗಳು ತಿಳಿಸಿದ್ದಾರೆ.

ತಮ್ಮ ಸಮಾಜದ ನಿಲುವನ್ನು ಕೇಳದೆ ಸಮಾಜದ ಹೆಸರನ್ನು ಬಳಸಿರುವ ಕುರಿತು ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, “ನಮ್ಮ ಸಮಾಜದ ನಿಲುವನ್ನು ಕೇಳದೆ ಸಮಾಜದ ಹೆಸರನ್ನು ಬಳಸುವುದು ಸರಿಯಲ್ಲ” ಎಂದು ಖಂಡಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಸಿ. ಹಡಪದ ಹಳ್ಳಿ ಶಹಾಬಾದ, ಕಲಬುರಗಿ ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ ಎನ್., ಜಿಲ್ಲಾ ಕಾರ್ಯಾಧ್ಯಕ್ಷ ಭಗವಂತ ಹಡಪದ, ಶಿಕ್ಷಕರು, ಕಿರಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ, ಜಿಲ್ಲಾ ಉಪಾಧ್ಯಕ್ಷ ರುದ್ರಮಣಿ ಅಪ್ಪಣ್ಣ ಬಟಗೇರಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್. ಉಪಸ್ಥಿತರಿದ್ದರು.

ಕಲಬುರಗಿ ನಗರಾಧ್ಯಕ್ಷ ಮಲ್ಲಿಕಾರ್ಜುನ ಹಡಪದ ಸಾವಳಗಿ, ಕಲಬುರಗಿ ತಾಲೂಕು ಅಧ್ಯಕ್ಷ ಚಂದ್ರಶೇಖರ ತೋನಸನಹಳ್ಳಿ, ವಿನೋದ ಅಂಬಲಗಾ, ಸುನೀಲ್ ಕುಮಾರ್ ಭಾಗ ಹಿಪ್ಪರರ್ಗಾ, ಶಿವಶರಣರ ಹಡಪದ ಯಳವಂತಗಿ, ಮಲ್ಲಿಕಾರ್ಜುನ ಬೆಳಗುಪ್ಪಿ, ಗುಂಡು ಹಡಪದ, ಶಂಕರ ಹರವಾಳ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ತಿಳಿಸಿದರು.

Leave a Reply

Your email address will not be published. Required fields are marked *

↑
Suddi Belaku