ಜಮಖಂಡಿ ಬಂದ್‌ಗೆ ವ್ಯಾಪಕ ಬೆಂಬಲ: ಕಬ್ಬಿಗೆ ₹5,500 ಬೆಲೆಗೆ ರೈತರ ಆಗ್ರಹ

Posted by

–

ಸುದ್ದಿ ಬೆಳಕು ವಾರ್ತೆ

ಜಮಖಂಡಿ : ಕಬ್ಬು ಬೆಳೆಗಾರರ ಬದುಕಿಗೆ ನ್ಯಾಯಯುತ ಬೆಲೆ ದೊರಕಬೇಕೆಂಬ ಬೇಡಿಕೆ ಈಗ ಜಮಖಂಡಿಯಲ್ಲಿ ಬೃಹತ್ ಹೋರಾಟದ ಸ್ವರೂಪ ಪಡೆದುಕೊಂಡಿದೆ. ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಜಮಖಂಡಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ನಗರದ ವ್ಯಾಪಾರ ವಹಿವಾಟು ಬಹುತೇಕ ಸ್ಥಗಿತಗೊಂಡಿತ್ತು.

ಬೆಳಿಗ್ಗೆಯಿಂದಲೇ ನಗರದ ದೇಸಾಯಿ ವೃತ್ತದಲ್ಲಿ ಜಮಾಯಿಸಿದ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ರೈತರ ಘೋಷಣೆಗಳಿಂದ ನಗರದಲ್ಲಿ ಹೋರಾಟದ ಕಾವು ಹೆಚ್ಚಾಯಿತು. ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ವ್ಯಾಪಾರಸ್ಥರು ಅಂಗಡಿ-ಮುಂಗಟ್ಟು ಹಾಗೂ ಹೋಟೆಲ್‌ಗಳನ್ನು ಮುಚ್ಚಿ ಬಂದ್‌ಗೆ ಸಹಕಾರ ನೀಡಿದರು.

ವ್ಯಾಪಾರಸ್ಥರ ಸಂಘ, ವಕೀಲರ ಸಂಘ, ವಿವಿಧ ಮಠಗಳ ಮಠಾಧೀಶರು ಹಾಗೂ ಕನ್ನಡಪರ ಸಂಘಟನೆಗಳು ರೈತರ ಬೇಡಿಕೆಗೆ ಧ್ವನಿಗೂಡಿಸಿದ್ದು, ಹೋರಾಟಕ್ಕೆ ಮತ್ತಷ್ಟು ಬಲ ನೀಡಿತು. ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದರೆ, ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿರಲಿಲ್ಲ.

ಬಸ್‌ಗಳಿಲ್ಲದೆ ಪ್ರಯಾಣಿಕರ ಪರದಾಟ:
ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144ನೇ ಕಲಂ ಜಾರಿಗೊಳಿಸಲಾಗಿತ್ತು. ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಬೆಂಗಳೂರು ಸೇರಿದಂತೆ ದೂರದ ಊರುಗಳಿಂದ ಜಮಖಂಡಿಗೆ ಆಗಮಿಸಬೇಕಿದ್ದ ಬಸ್‌ಗಳು ಲೋಕಾಪುರ, ಮುಧೋಳ ಸುತ್ತಮುತ್ತ ಸಂಚಾರ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಗಮ್ಯಸ್ಥಾನ ತಲುಪಲು ಪರದಾಡುವಂತಾಯಿತು.

ಗ್ರಾಮೀಣ ಭಾಗದಲ್ಲೂ ಹೋರಾಟದ ಕಾವು:
ಜಮಖಂಡಿ ನಗರಕ್ಕೆ ಸೀಮಿತವಾಗದೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿಯೂ ರೈತರು ಪ್ರತಿಭಟನೆ ನಡೆಸಿದರು. ಹುಲ್ಯಾಳ ಕ್ರಾಸ್, ಚಿಕ್ಕಲಕಿ ಕ್ರಾಸ್, ಟಕ್ಕೋಡ ಕ್ರಾಸ್, ಹಿಪ್ಪರಗಿ, ಆಲಗೂರ, ಚಿಕ್ಕಪಡಸಲಗಿ ಸೇರಿದಂತೆ ಹಲವು ಕಡೆ ರಸ್ತೆ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಒಂದೂವರೆ ತಿಂಗಳಿನಿಂದ ಚುನ್ನಪ್ಪ ಪೂಜಾರ ಹಾಗೂ ಶಶಿಕಾಂತ ಪೂಜಾರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲವಾಗಿ ತಾಲ್ಲೂಕು ಬಂದ್‌ಗೆ ಕರೆ ನೀಡಲಾಗಿದೆ ಎಂದು ರೈತ ಮುಖಂಡರು ತಿಳಿಸಿದರು.
ರಸಗೊಬ್ಬರ, ಬಿತ್ತನೆ ಬೀಜ, ಕೃಷಿ ಪರಿಕರಗಳು, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆಹಾರಧಾನ್ಯ, ಹಾಲು, ಮೊಸರು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆಯೂ ಹೆಚ್ಚಾಗಿದ್ದು, ಕೃಷಿ ವೆಚ್ಚವನ್ನು ಭರಿಸುವುದೇ ರೈತರಿಗೆ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಕಬ್ಬಿಗೆ ಸಮರ್ಪಕ ಬೆಲೆ ದೊರಕದಿದ್ದರೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ಅನಿವಾರ್ಯ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ದೇಶಕ್ಕೆ ಅನ್ನ ನೀಡುವ ರೈತರ ಶ್ರಮ ಮತ್ತು ಸಂಕಷ್ಟವನ್ನು ಸರ್ಕಾರ ಅರ್ಥಮಾಡಿಕೊಂಡು ತಕ್ಷಣವೇ ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಕಬ್ಬಿಗೆ ಸೂಕ್ತ ಬೆಲೆ ಘೋಷಿಸುವವರೆಗೆ ತಾಲ್ಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ರೈತ ಸಂಘಟನೆಗಳು ಸ್ಪಷ್ಟಪಡಿಸಿವೆ. ಬಂದ್ ಯಶಸ್ವಿಯಾಗಿರುವುದು ರೈತರ ಒಗ್ಗಟ್ಟಿನ ಶಕ್ತಿಯನ್ನು ತೋರಿಸಿದ್ದು, ಸರ್ಕಾರದ ಮುಂದಿನ ನಿರ್ಧಾರದತ್ತ ಈಗ ಎಲ್ಲರ ಗಮನ ನೆಟ್ಟಿದೆ.

ಹೋರಾಟದಲ್ಲಿ ಭಾಗವಹಿಸಿದವರು: ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀಗಳು, ಓಲೆಮಠದ ಆನಂದ ದೇವರು, ಲಕ್ಷ್ಮಣ ಮುತ್ಯಾ, ಸಿದ್ಧಲಿಂಗ ದೇವರು, ಮುತ್ತೂರಿನ ಗವಿಸಿದ್ಧ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಹಾಗೂ ರೈತ ಮುಖಂಡರಾದ ಶ್ರೀಶೈಲ ಭೂಮಾರ, ರಾಜು ನದಾಫ, ಕಲ್ಲಪ್ಪ ಬಿರಾದಾರ, ಶಿವಶಂಕರ ಪಾಟೀಲ, ಬಾಹುಬಲಿ ನ್ಯಾಮಗೌಡ, ಮಲ್ಲಿಕಾರ್ಜುನ ಬೆಕ್ಕೇರಿ, ಬಿ.ಎಸ್. ಸಿಂಧೂರ, ಸುಶೀಲ ಬೆಳಗಲಿ, ಮಹದೇವ ಇಟ್ಟಿ, ಯೋಗಪ್ಪ ಸವದಿ, ಉಮೇಶ ಆಲಮೇಲ್ಕರ, ಸಿದ್ಧನಗೌಡ ಪಾಟೀಲ, ಸಚಿನ ಖಿದ್ರಾಪೂರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

↑
Suddi Belaku