
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಮುಂಗಾರು ಮಳೆ ಕೈಕೊಟ್ಟು ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಿ ಅನ್ನದಾತರ ಬದುಕು ಹಸನಾಗಲಿ ಎಂಬ ಸಂಕಲ್ಪದೊಂದಿಗೆ ಯಾದಗಿರಿ ಸಮೀಪದ ಹೆಡಗಿಮದ್ರಿ ಗ್ರಾಮದ ಶ್ರೀ ಶಾಂತ ಶಿವಯೋಗೇಶ್ವರ ಸಂಸ್ಥಾನ ಮಠದಲ್ಲಿ ಏಳು ದಿನಗಳ ಸಪ್ತ ಭಜನೆ ಹಾಗೂ ಶಿವನಾಮ ಸ್ಮರಣೆ ಆರಂಭವಾಗಿದೆ.
ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಶಿವಯೋಗಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಮಂಗಳವಾರದಿಂದ ರೈತರು ವಿಶೇಷ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬರುವ ಸೋಮವಾರ ಬೆಳಗ್ಗೆ ಮುಕ್ತಾಯಗೊಳ್ಳಲಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಪಾಳಿಯಂತೆ ಏಳು ಮಂದಿ ರೈತರು ದೇವಾಲಯದ ಪ್ರಾಂಗಣದಲ್ಲಿ “ಓಂ ನಮಃ ಶಿವಾಯ” ಮಂತ್ರ ಜಪದೊಂದಿಗೆ ಸಪ್ತ ಭಜನೆ ನಡೆಸುತ್ತಿದ್ದಾರೆ. ವರುಣ ದೇವನು ಕೃಪೆ ತೋರಿ ಮಳೆ ಸುರಿಸಿ ರೈತರ ಬೆಳೆಗಳನ್ನು ಕಾಪಾಡಲಿ ಎಂಬ ಉದ್ದೇಶದಿಂದ ಈ ವಿಶೇಷ ಪ್ರಾರ್ಥನೆ ನಡೆಯುತ್ತಿದೆ.
ಮೂವತ್ತು ವರ್ಷಗಳ ಬಳಿಕ ಮತ್ತೆ ಸಪ್ತ ಭಜನೆ
ಕಾರ್ಯಕ್ರಮದ ಕುರಿತು ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ, ರೈತರು ಮಳೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಅನ್ನದಾತ ಸುಖಿಯಾಗಿದ್ದರೆ ಮಾತ್ರ ನಾಡು ಸಮೃದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ ಮಳೆಗಾಗಿ ಸಪ್ತ ಭಜನೆ ಆಯೋಜಿಸಲಾಗಿದೆ ಎಂದರು.
ಸುಮಾರು ಮೂವತ್ತು ವರ್ಷಗಳ ಹಿಂದೆ ಇದೇ ರೀತಿಯ ಸಪ್ತ ಭಜನೆ ಆಯೋಜಿಸಲಾಗಿತ್ತು. ಈಗ ಮತ್ತೆ ರೈತರ ಹಿತದೃಷ್ಟಿಯಿಂದ ಈ ಧಾರ್ಮಿಕ ಆಚರಣೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
‘ಕಲಿಯುಗದಲ್ಲಿ ನಾಮಸ್ಮರಣೆಗೆ ವಿಶೇಷ ಶಕ್ತಿ’
ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಶಿವಯೋಗಿ ಸ್ವಾಮೀಜಿ ಮಾತನಾಡಿ, ಈ ನಾಡಿನ ಋಷಿ ಪರಂಪರೆ ಮತ್ತು ಕೃಷಿ ಪರಂಪರೆ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ. ಕೃಷಿಕರು ಇಂದು ಮಳೆ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದು, ಪೂಜೆ, ತಪಸ್ಸು ಹಾಗೂ ಅನುಷ್ಠಾನದ ಫಲವಾಗಿ ಉತ್ತಮ ಮಳೆಯಾಗಿ ರೈತರು ಸುಭಿಕ್ಷವಾಗಿ ಬದುಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಗುತ್ತಿದೆ ಎಂದರು.
“ಕಲೌ ನಾಮ ಸಂಕೀರ್ತನಂ” ಎಂಬ ಮಾತಿನಂತೆ ಕಲಿಯುಗದಲ್ಲಿ ನಾಮಸ್ಮರಣೆಗೆ ವಿಶೇಷ ಶಕ್ತಿ ಇದೆ. ಶಿವನಾಮ ಸ್ಮರಣೆಯಿಂದ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ರಾಜ್ಯದ ವಿವಿಧ ಮಠಗಳಲ್ಲಿ ಮಳೆಗಾಗಿ ಪ್ರಾರ್ಥನೆ ನಡೆಯುತ್ತಿರುವಂತೆ ನಮ್ಮ ಮಠದಲ್ಲಿಯೂ ರೈತರು ಒಗ್ಗೂಡಿ ಶಿವನಾಮ ಸ್ಮರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಮುಂಬರುವ ಏಳು ದಿನಗಳೊಳಗೆ ಉತ್ತಮ ಮಳೆಯಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಬರದ ಛಾಯೆ ದೂರವಾಗಿ ನಾಡು ಸಮೃದ್ಧಿಯಾಗಲಿ ಎಂದು ಹಾರೈಸಿದರು.
ಭಕ್ತರ ದಂಡು
ಸಪ್ತ ಭಜನೆ ಆರಂಭಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಹೆಡಗಿಮದ್ರಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಭಕ್ತರಿಗಾಗಿ ಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಶಿವನಾಮ ಸ್ಮರಣೆ ಹಾಗೂ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ಭೀಮಣ್ಣಗೌಡ ಕ್ಯಾತನಾಳ, ಶಾಂತಗೌಡ ಪಗಲಾಪುರ, ಅನೀಲಕುಮಾರ ಕರಾಟೆ, ಜನಾರ್ಧನ ರಾಠೋಡ, ಸುರೇಶ್ ರಾಠೋಡ, ಮನೋಹರ ಪವಾರ, ಮೇಘನಾಥ ಚವ್ಹಾಣ, ಶಂಕರ ರಾಠೋಡ, ಶಾಂತಗೌಡ, ಶಂಕರ, ಲಾಲಸಿಂಗ್ ಪವಾರ, ರಮೇಶ್ ಸೇರಿದಂತೆ ಗ್ರಾಮಸ್ಥರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.












Leave a Reply