ಹತ್ತಿಕುಣಿ ಕಾಡಾ ನಾಲಾ ಆಧುನೀಕರಣಕ್ಕೆ ₹72 ಕೋಟಿ ಅನುಮೋದನೆ: ರೈತರಿಗೆ ಹರ್ಷ

Posted by

ಸುದ್ದಿ ಬೆಳಕು ವಾರ್ತೆ

ಗುರುಮಠಕಲ್. ಏಪ್ರಿಲ್ 17 : ಕ್ಷೇತ್ರದ ರೈತರ ದಶಕಗಳ ಕನಸಾಗಿದ್ದ ಹತ್ತಿಕುಣಿ ಕಾಡಾ ನಾಲಾ ಆಧುನೀಕರಣ ಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್ ದೊರೆತಿದ್ದು, ರಾಜ್ಯ ಸಚಿವ ಸಂಪುಟವು ₹72 ಕೋಟಿ ಅನುದಾನಕ್ಕೆ ಅಧಿಕೃತ ಅನುಮೋದನೆ ನೀಡಿದೆ.

ಈ ಯೋಜನೆಗಾಗಿ ಶಾಸಕ ಶರಣಗೌಡ ಕಂದಕೂರ ಕಳೆದ ಮೂರು ತಿಂಗಳಿನಿಂದ ಸರ್ಕಾರವನ್ನು ಸತತವಾಗಿ ಮನವಿ ಮಾಡುತ್ತಿದ್ದರು. ಸದನದಲ್ಲಿ ವಿಷಯ ಪ್ರಸ್ತಾಪಿಸಿ, ಉಪಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಗಮನ ಸೆಳೆಯುವ ಮೂಲಕ ಯೋಜನೆಯ ತುರ್ತು ಅಗತ್ಯವನ್ನು ವಿವರಿಸಿದ್ದರು. ಇದರ ಫಲವಾಗಿ ಸಚಿವ ಸಂಪುಟದಿಂದ ಅನುದಾನ ಮಂಜೂರಾಗಿದೆ.

ಈ ಯೋಜನೆಯಿಂದ ಹತ್ತಿಕುಣಿ, ಕಟಗಿ ಶಹಪುರ, ಹೊನಗೇರಿ, ಯಡ್ಡಳ್ಳಿ, ಬಂದಳ್ಳಿ ಹಾಗೂ ದಸರಾಬಾದ್ ಗ್ರಾಮಗಳ ಸುಮಾರು 5,400 ಎಕರೆ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ಲಭಿಸಲಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.

ಯೋಜನೆಗೆ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಸಹಕಾರ ಮಹತ್ವದ ಪಾತ್ರ ವಹಿಸಿದೆ ಎಂದು ಶಾಸಕ ಕಂದಕೂರ ತಿಳಿಸಿದ್ದಾರೆ. ಜೊತೆಗೆ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಸಕಾರಾತ್ಮಕ ಸ್ಪಂದನೆ ಹಾಗೂ ಇಲಾಖೆಯ ಪರಿಶೀಲನೆಯಿಂದ ಯೋಜನೆಗೆ ಅನುಮೋದನೆ ಸಿಕ್ಕಿದೆ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯದೊಂದಿಗೆ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ನೆರವಾಗಲಿದೆ. ಅಭಿವೃದ್ಧಿಯ ಈ ಕ್ರಮಕ್ಕಾಗಿ ಕ್ಷೇತ್ರದ ಜನತೆ ಸರ್ಕಾರಗಳಿಗೆ ಹಾಗೂ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಯೋಜನೆ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಲಿದ್ದು, ರೈತರ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವುದಾಗಿ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

Suddi Belaku