ಡಾ. ವೀರಬಸವಂತರೆಡ್ಡಿ ಮುದ್ನಾಳ ವೈದ್ಯಕೀಯ–ರಾಜಕೀಯಕ್ಕೆ ಮಾದರಿ: ಸಚಿವ ಎಂ.ಬಿ. ಪಾಟೀಲ್

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಮಾಜಿ ಶಾಸಕರಾದ ಲಿಂ.ಡಾ.ವೀರಬಸವಂತರೆಡ್ಡಿ ಮುದ್ದಾಳ ಅವರು ಕಾಯಕ ನಿಷ್ಠೆ, ಶಿಸ್ತಿನ ಸಿಪಾಯಿ, ಬದ್ಧತೆಯ ಜೀವನ ನಡೆಸುವ ಮೂಲಕ ವೈದ್ಯಕೀಯ ವೃತ್ತಿ ಮತ್ತು ರಾಜಕೀಯದಲ್ಲೂ ಇತರರಿಗೆ ಮಾದರಿಯಾಗಿದ್ದರೆಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ನಗರದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ವೀರಬಸವಂತರೆಡ್ಡಿ ಮುದ್ನಾಳ ಅವರ 2ನೇ ಪುಣ್ಯಸ್ಮರಣೆ ಹಾಗೂ ಸಾಹಿತಿ ಡಾ.ಸುಭಾಷಚಂದ್ರ ಕೌಲಗಿ ಸಂಪಾದಕತ್ವದ ಗ್ರಂಥ ಬಿಡುಗಡೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯಪುರದ ಬಿಎಲ್‌ಡಿ ಸಂಸ್ಥೆಯ ಮೆಡಿಕಲ್ ಕಾಲೇಜಿನಲ್ಲಿ ಸುಮಾರು ಎರಡು ದಶಕಗಳ ಕಾಲ ಉತ್ತಮ ಸೇವೆ ಸಲ್ಲಿಸುವ ಮೂಲಕ ಸಂಸ್ಥೆ ಬೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಾ.ಮುದ್ದಾಳ ಅವರು, ರಾಜಕೀಯಕ್ಕೆ ಬಂದು ಪಕ್ಷೇತರ ಶಾಸಕರಾಗಿ ಅನೇಕ ಜನಪರ ಕೆಲಸ ಮಾಡುವ ಮೂಲಕ ಜನಾನೂರಾಗಿಯಾಗಿದ್ದರೆಂದು ಸಚಿವರು ಬಣ್ಣಿಸಿದರು.
ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಿದ ವ್ಯಕ್ತಿ ಲಿಂಗೈಕ್ಯರಾದ ಮೇಲೂ ಜನಮಾನಸದಲ್ಲಿ ಉಳಿಯುತ್ತಾರೆಂಬುವುದಕ್ಕೇ ಇಂದು ಇಲ್ಲಿ ಸೇರಿದ ಸಾಕ್ಷಿಯಾಗಿದ್ದಾರೆಂದ ಅವರು, ನೇರ ನುಡಿ, ಹಾಸ್ಯ ಸ್ವಭಾವದ ವ್ಯಕ್ತಿಯಾಗಿದ್ದರೆಂದು ಬಣ್ಣಿಸಿದರು. ಬಿಎಲ್‌ ಡಿ ಸಂಸ್ಥೆಯೊಂದಿಗೆ ಉತ್ತಮ ಒಡನಾಟ ಹೊಂದಿದ್ದರಲ್ಲದೇ ಅನೇಕ ಸಲಹೆಗಳನ್ನು ನೀಡುತ್ತಿದರು. ಹೀಗಾಗಿ ಇಲ್ಲಿಗೆ ನಾನು ಮಂತ್ರಿಯಾಗಿಲ್ಲ, ಬಿಎಲ್‌ ಡಿ ಸಂಸ್ಥೆ ಅಧ್ಯಕ್ಷನಾಗಿ ಬಂದಿರುವೆ ಎಂದು ಹೇಳುವ ಮೂಲಕ ಡಾ.ವೀರಬಸವಂತರೆಡ್ಡಿ ಮುದ್ದಾಳ ಅವರ ವ್ಯಕ್ತಿತ್ವವಕ್ಕೆ ಮೆರಗು ನೀಡಿದರು. ಶಾಸಕರಾದ ಶರಣಬಸಪ್ಪ ದರ್ಶನಾಪುರ, ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ ಮತ್ತು ಮಾಜಿ ಸಚಿವ ಅಮರೇಗೌಡ ಭಯ್ಯಾಪುರ ಮಾತನಾಡಿ, ಡಾ.ವೀರಬಸವಂತರೆಡ್ಡಿ ಅವರು ಜನಸಾಮಾನ್ಯರ ಶಾಸಕರಾಗಿದ್ದರು, ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಬೆಲೆ ಕೊಡುತ್ತಿದ್ದರು. ವೈದ್ಯಕೀಯ ಸೇವೆಯಲ್ಲೂ ಅಪಾರ ಜ್ಞಾನ ಹೊಂದಿದ್ದರು, ಅನೇಕ ಬಡರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದರು. ಎಂತಹದ್ದೇ ರೋಗಕ್ಕೂ ಸರಳ ಚಿಕಿತ್ಸೆ ನೀಡುವ ಮೂಲಕ ಗುಣ ಮಾಡುತ್ತಿದ್ದರೆಂದು ಬಣ್ಣಿಸಿದ್ದರು.ಸಾನಿಧ್ಯ ವಹಿಸಿದ್ದ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮಿಗಳು ಮಾತನಾಡಿ, ಡಾ.ವೀರಬಸವಂತರೆಡ್ಡಿ ಮುದ್ದಾಳ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ವೈದ್ಯಕೀಯ, ರಾಜಕೀಯ, ಸಾಮಾಜಿಕ ರಂಗದಲ್ಲೂ ಉದಾರ ಸೇವೆ ಸಲ್ಲಿಸುವ ಮೂಲಕ ಆ ಮನೆತನದ ಹೆಸರು ಮುಗಿಲೆತ್ತರಕ್ಕೆ ಮುಟ್ಟಿಸಿದ್ದಾರೆಂದು ಹೇಳಿದರು. ಹೆಡಗಿಮದ್ರಿ ಶಾಂತಶಿವಯೋಗೀಶ್ವರ ಸಂಸ್ಥಾನ ಮಠದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ದಾಸಬಾಳ ಮಠ ವೀರೇಶ್ವರ ಸ್ವಾಮಿಗಳು, ಗುರುಮಠಕಲ್‌ ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಮತ್ತು ದಂಡಗುಂಡದ ಬಸವೇಶ್ವರ ಸಂಸ್ಥಾನ ಹಿರೇಮಠದ ಸಂಗನಬಸವ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಬಸವ ಸಮಿತಿ ಉಪಾಧ್ಯಕ್ಷ ಹಣಮಂತರೆಡ್ಡಿ ಮುದ್ದಾಳ್‌, ಡಾ.ಸಂಗಮ್ಮ ವೀರಬಸವಂತರೆಡ್ಡಿ ಮುದ್ದಾಳ. ಡಾ.ಅಮೋಘ ಸಿದ್ದೇಶ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರೆಡ್ಡಿ ಮುದ್ದಾಳ ವೇದಿಕೆಯಲ್ಲಿದ್ದರು. ಪ್ರಮುಖರಾದ  ಭೀಮನಗೌಡ ಕ್ಯಾತನಾಳ, ಡಾ.ಬಸವರಾಜ ನರಸಣಗಿ, ಸಿದ್ದಪ್ಪ ಹೊಟ್ಟಿ, ಮಾರುತಿ ಕಲಾಲ, ಚನ್ನಪ್ಪಗೌಡ ಮೊಸಂಬಿ, ವಿಶ್ವನಾಥ ಸಿರವಾರ, ಮಹಾದೇವಪ್ಪ ಆರ್.ಅಬ್ಬೆತುಮಕೂರು, ಸುರೇಶ ರಾಠೋಡ, ಡಾ. ಕ್ಷೀತಿಜ್ ನರಸಣಗಿ, ರಮೇಶ ದೊಡ್ಡಮನಿ, ಗುಂಡಪ್ಪ ಇಟಕಲ್ ಮುದ್ದಾಳ ಕುಟುಂಬದ ಸದಸ್ಯರು, ಅಭಿಮಾನಿಗಳು ಸೇರಿದಂತೆಯೇ ಇತರರಿದ್ದರು. ಗ್ರಂಥ ಸಂಪಾದಕ ಡಾ.ಕೌಲಗಿ ಅವರನ್ನು ಸನ್ಮಾನಿಸಲಾಯಿತು.
ಸಾಹಿತಿ ಡಾ.ಸಿದ್ದರಾಜರೆಡ್ಡಿ ನಿರೂಪಿಸಿದರು. ಸ್ವಾಗತ ವೀರಾರಡ್ಡಿ ಮುದ್ದಾಳ ಸ್ವಾಗತಿಸಿದರು.ಡಾ.ಶರಣಮ್ಮ ನರಸಣಗಿ ವಂದಿಸಿದರು.

You Might Also Like

Leave a Reply

Your email address will not be published. Required fields are marked *

Suddi Belaku