ಹಿರಿಯ ಆಯುರ್ವೇದ ವೈಧ್ಯ ಕುಲಕರ್ಣಿಗೆ ಆಯುರ್ ಭೂಷಣ ಪ್ರಶಸ್ತಿ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಕಳೆದ ೩೦ ವರ್ಷಗಳಿಂದ ಆಯುರ್ವೇದ ವೈಧ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಪ್ರಮೋದ ಕುಲಕರ್ಣಿ ಅವರಿಗೆ ಎಷಿಯನ್ ನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭದಿಂದ ಆರೋಗ್ಯ ಕ್ಷೇತ್ರದಲ್ಲಿ ನೀಡುವ ೨೦೨೬ನೇ ಆಯುರ್ ಭೂಷಣ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ.
ಬೆಂಗಳೂರಿನ ತಾಜ್ ಹೋಟಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಪರಿಷತ್‌ನ ಉಪಸಭಾಪತಿಗಳಾದ ಉಮಾಶ್ರೀ ಹಾಗೂ ಇತರ ಗಣ್ಯರು ಪ್ರಶಸ್ತಿ ನೀಡಿ, ಸನ್ಮಾನಿಸಿ, ಗೌರವಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿ ಡಾ. ಕುಲಕರ್ಣಿ, ಪ್ರಶಸ್ತಿ ದೊರೆತಿರುವುದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ, ನಾನು ಮೊದಲು ಗಡಿಭಾಗದ ಮಾದ್ವಾರ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಸುಧೀರ್ಘಕಾಲ ಸರ್ಕಾರಿ ವೈಧ್ಯರಾಗಿ ಕೆಲಸ ಮಾಡಿದ್ದೇನೆ, ಹಾಗೂ ನಗರದ ಆಯುರ್ವೇದ ಜಿಲ್ಲಾಸ್ಪತ್ರೆಯಲ್ಲಿ ಕಳೆದ ೧ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಈ ಭರತ ಭೂಮಿಯ ಮೂಲ ಚಿಕಿತ್ಸಾ ಪದ್ದತಿಯಾದ ಆಯುರ್ವೇದ ಚಿಕಿತ್ಸೆ ಹಾಗೂ ಲಾಭದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅವರು ಎದುರಿಸುತ್ತಿರುವ ಹಲವಾರು ರೋಗಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ, ಪರಿಹಾರ ಒದಗಿಸಿದ ಆತ್ಮತೃಪ್ತಿ ನನಗಿದೆ ಎಂದು ತಿಳಿಸಿದರು.
ಈ ಭಾಗದಲ್ಲಿ ಅನೇಕ ರೋಗಿಗಳು ಆಯುರ್ವೇದ ಚಿಕಿತ್ಸೆ ಪಡೆಯಲು ದೂರದ ಕಾರವಾರ, ಉಡುಪಿ, ಹಾಸನ, ಧರ್ಮಸ್ಥಳ, ನೆರೆಯ ಮಹಾರಾಷ್ಟçದ ಮೀರಜ್, ಸಾಂಗ್ಲಿಗೆ ಹೋಗುತ್ತಾರೆ, ಸರ್ಕಾರ ಕಲ್ಯಾಣ ಕರ್ನಾಟಕದಲ್ಲಿ ಆಯುರ್ವೇದಿಕ್ ಚಿಕಿತ್ಸೆ ಪರಿಣಾಮಕಾರಿಯಾಗಿ ಜಾರಿಯಾಗಲು ಗಮನ ನೀಡಬೇಕು, ಜಿಲ್ಲಾ ಕೇಂದ್ರದಲ್ಲಿ ೫೦ ಬೆಡ್‌ಗಳ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು, ಅಂದಾಗ ಮಾತ್ರ ಆಯುರ್ವೇದ ಚಿಕಿತ್ಸೆಗಳ ಚಟುವಟಿಕೆಗಳಿಗೆ ವೇಗ ಹೆಚ್ಚಾಗುತ್ತದೆ, ಜೊತೆಗೆ ಇಲ್ಲಿಯೇ ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

↑
Suddi Belaku