ದೋರನಹಳ್ಳಿಯಲ್ಲಿ ಭಗವಾನ್ ವಿಶ್ವಕರ್ಮ ಜಯಂತಿ ಸಂಭ್ರಮ

Posted by

–

ಸುದ್ದಿ ಬೆಳಕು ವಾರ್ತೆ

ಶಹಾಪುರ : “ತಮ್ಮ ಅದ್ಭುತ ಕಲಾ ನೈಪುಣ್ಯ, ಕಠಿಣ ಪರಿಶ್ರಮ ಮತ್ತು ಸೃಜನಶೀಲತೆಯ ಮೂಲಕ ಇಡೀ ಜಗತ್ತಿಗೆ ಅಪಾರ ಕೊಡುಗೆ ನೀಡಿರುವ ವಿಶ್ವಕರ್ಮ ಸಮುದಾಯದವರು ನೈಜ ವಿಶ್ವ ನಿರ್ಮಾತೃಗಳು,” ಎಂದು ವಿಶ್ವಕರ್ಮ ಸಮಾಜದ ಯುವ ಮುಖಂಡ ಮಂಜುನಾಥ ಕಂಚಗಾರ ಪ್ರತಿಪಾದಿಸಿದರು.

ದೋರನಹಳ್ಳಿ  ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಭಕ್ತಿಭಾವದಿಂದ ಆಯೋಜಿಸಲಾಗಿದ್ದ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ದೋರನಹಳ್ಳಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಚಂದ್ರಶೇಖರ ಪತ್ತಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, “ವಿಶ್ವಕರ್ಮ ಜನಾಂಗವು ಸದಾ ಶಾಂತಿಪ್ರಿಯ ಹಾಗೂ ಸ್ನೇಹಮಯ ಸಮುದಾಯವಾಗಿದೆ. ಜಗತ್ಪ್ರಸಿದ್ಧ ಐತಿಹಾಸಿಕ ತಾಣಗಳಾದ ಬೇಲೂರು, ಹಳೇಬೀಡು, ಬಾದಾಮಿ, ಪಟ್ಟದಕಲ್ಲು ಸೇರಿದಂತೆ ನಾಡಿನ ಭವ್ಯ ಶಿಲ್ಪಕಲೆ ಹಾಗೂ ಐತಿಹಾಸಿಕ ಶಾಸನಗಳ ಕೆತ್ತನೆಗಳ ಹಿಂದಿರುವುದು ವಿಶ್ವಕರ್ಮ ಸಮುದಾಯದ ನಿಸ್ವಾರ್ಥ ಶ್ರಮ,” ಎಂದು ಸ್ಮರಿಸಿದರು.

ಸಮಾಜದ ಗೌರವಾಧ್ಯಕ್ಷ ಗಂಗಾಧರ ಕಂಬಾರ ಮಾತನಾಡಿ, “ಸನಾತನ ಕಾಲದಿಂದಲೂ ಶಿಲ್ಪಿಗಳು, ಸ್ವರ್ಣಕಾರರು ಸೇರಿದಂತೆ ಪಂಚ ಕಸುಬುಗಳ ಮೂಲಕ ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅನನ್ಯವಾಗಿದೆ. ತ್ರಿಮೂರ್ತಿಗಳು ಹಾಗೂ ಇಂದ್ರಾದಿ ದೇವತೆಗಳಿಗೆ ದಿವ್ಯಾಸ್ತ್ರ ಮತ್ತು ರಥಗಳನ್ನು ನಿರ್ಮಿಸಿಕೊಟ್ಟ ಭಗವಾನ್ ವಿಶ್ವಕರ್ಮರ ಕೌಶಲ, ಏಕಾಗ್ರತೆ ಹಾಗೂ ತಾಳ್ಮೆ ಇಂದಿನ ಯುವಜನತೆಗೆ ಆದರ್ಶವಾಗಬೇಕು. ಸಮುದಾಯವು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಪ್ರಗತಿ ಸಾಧಿಸಲು ಪೋಷಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು,” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಮಹೇಶ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮುನ್ನ ದೇವಸ್ಥಾನದ ಅರ್ಚಕ ಮನೋಹರ ಪತ್ತಾರ ಶ್ರೀ ಕಾಳಿಕಾದೇವಿಗೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಸಮಾಜದ ಅಧ್ಯಕ್ಷ ಚಂದ್ರಶೇಖರ ಪತ್ತಾರ ಧ್ವಜಾರೋಹಣ ನೆರವೇರಿಸಿದರು.

“ವಿಶ್ವಕರ್ಮ ಸಮುದಾಯವು ಕಲೆ, ವಾಸ್ತುಶಿಲ್ಪ ಹಾಗೂ ಸಮಾಜ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದೆ. ವಜ್ರ, ಚಿನ್ನ, ಬೆಳ್ಳಿ ವ್ಯಾಪಾರ ಮಾತ್ರವಲ್ಲದೆ ಸಾರ್ವಜನಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲೂ ತನ್ನದೇ ಛಾಪು ಮೂಡಿಸಿದೆ. ಶಿಲೆಗಳಿಗೆ ಜೀವ ತುಂಬಿ ದೇವತಾ ಮೂರ್ತಿಗಳನ್ನಾಗಿಸಿದ ಶ್ರೇಯಸ್ಸು ಈ ಸಮುದಾಯಕ್ಕಿದೆ,” ಎಂದು ಹಿರಿಯ ಮುಖಂಡ ಮಲಕಪ್ಪ ಕಂಚಗಾರ ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಪ್ರಮುಖರಾದ ಘಂಟೆಪ್ಪ ಪತ್ತಾರ, ದೇವೇಂದ್ರಪ್ಪ ಕಂಬಾರ, ಗುರುನಾಥ ಕಂಚಗಾರ, ಜಗನ್ನಾಥ ಶೃಂಗಾರ, ಮಹೇಶ ಕಂಚಗಾರ, ಮಹೇಶ ದೊಡ್ಡಪ್ಪ ಪತ್ತಾರ, ರಾಚಣ್ಣ ಶೃಂಗಾರ, ಮೌನೇಶ ಕಂಚಗಾರ, ವೀರೇಶ ಕಂಬಾರ, ಗಂಗಾಧರ ಕಂಚಗಾರ, ಕಾಶಿನಾಥ ಕಂಚಗಾರ, ವೀರೇಶ ಕಂಚಗಾರ ಮತ್ತಿತರರು ಉಪಸ್ಥಿತರಿದ್ದರು. ಕಾಶಿನಾಥ ಕಂಚಗಾರ ಪ್ರಾರ್ಥಿಸಿದರು, ಗುರುನಾಥ ಕಂಚಗಾರ ಸ್ವಾಗತಿಸಿದರು.

You Might Also Like

Leave a Reply

Your email address will not be published. Required fields are marked *

↑
Suddi Belaku