
ಸುದ್ದಿ ಬೆಳಕು ವಾರ್ತೆ
ದೇವರಭೂಪೂರ, ಏಪ್ರಿಲ್ 19 ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಅಮರೇಶ್ವರ ಗುರುಗಳ 21ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಷ.ಬ್ರ. ಅಭಿನವ ಗಜದಂಡ ಶಿವಾಚಾರ್ಯರ 21ನೇ ಗುರುಪಟ್ಟಾಧಿಕಾರ ಮಹೋತ್ಸವದ ಪೋಸ್ಟರ್ ಅನ್ನು ಭಕ್ತರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರುಗಳು, ಗುರು ಪರಂಪರೆಯ ಮಹತ್ವವನ್ನು ವಿವರಿಸಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಹೇಳಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಲಕ್ಷ್ಮೀಪುರದ ಶ್ರೀ ಗಿರಿ ಸಂಸ್ಥಾನದ ಡಾ. ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಹಾಗೂ ರುಕ್ಮಾಪುರ ಹಿರೇಮಠ ಸಂಸ್ಥಾನದ ಗುರು ಶಾಂತಮೂರ್ತಿ ಶಿವಾಚಾರ್ಯ ಸೇರಿದಂತೆ ಇತರ ಪೂಜ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಗೌರವ ತುಂಬಿದರು.
ಜುಲೈ 4ರಿಂದ 24ರವರೆಗೆ ನಡೆಯಲಿರುವ ಈ ಮಹೋತ್ಸವದಲ್ಲಿ ವೇದಾಂತ ಸಮ್ಮೇಳನ, ಧರ್ಮ ಸಂದೇಶ, ಮಹಾರುದ್ರ ಯಜ್ಞ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ರೈತ ಜನಪದೋತ್ಸವ, ಆರೋಗ್ಯ ಶಿಬಿರಗಳು, ಯುವ ಜನೋತ್ಸವ, ಸೈನಿಕರು ಹಾಗೂ ಆದರ್ಶ ನೌಕರರಿಗೆ ಸನ್ಮಾನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
ಜುಲೈ 23ರಂದು ಲಿಂಗದೀಕ್ಷೆ ಹಾಗೂ ಅಯ್ಯಾಚಾರ ನಡೆಯಲಿದ್ದು, ಜುಲೈ 24ರಂದು ಮಹಾರುದ್ರಯಜ್ಞ ಪೂರ್ಣಾಹುತಿ, ಸದ್ಧರ್ಮ ಸಮಾರಂಭ ಹಾಗೂ ನೂತನ ರಥೋತ್ಸವ ಕಾರ್ಯಕ್ರಮಗಳು ಭವ್ಯವಾಗಿ ನಡೆಯಲಿವೆ.
ಈ ಮಹೋತ್ಸವಕ್ಕೆ ದೇವರಭೂಪೂರ, ಗುರುಗುಂಟಾ, ಗುಂತಗೋಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥಾನ ಬೃಹನ್ಮಠದ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.










Leave a Reply