ಬೀದರ್ ಕಾರಾಗೃಹದಲ್ಲಿ 17 ಬಂದಿಗಳಿಗೆ ಎಲೆಕ್ಟ್ರಿಕಲ್ ಫಿಟ್ಟಿಂಗ್ ತರಬೇತಿ

Posted by

–

ಸುದ್ದಿ ಬೆಳಕು ವಾರ್ತೆ

ಬೀದರ್ : ಬೀದರ್ ಕಾರಾಗೃಹದಲ್ಲಿ ಉತ್ತಮ ರೀತಿಯಲ್ಲಿ ತರಬೇತಿ ಪಡೆದುಕೊಂಡು, ಉತ್ತಮ ನಾಗರಿಕರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕಾರಾಗೃಹದಿಂದ ಬಿಡುಗಡೆ ಹೊಂದಿದ ನಂತರ ಇಲ್ಲಿ ಪಡೆದ ಕೌಶಲ್ಯ ತರಬೇತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೀದರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಘವೇಂದ್ರ ಉಪಾಧ್ಯೆ ಅವರು ಹೇಳಿದರು.

ಬೀದರ್ ಕಾರಾಗೃಹದಲ್ಲಿ ಇತ್ತೀಚೆಗೆ ಬೀದರ್ ಕಾರ್ಮೇಲ್ ಸೇವಾ ಟ್ರಸ್ಟ್ ಸಂಸ್ಥೆ, ಬೀದರ್ ಡಾನ್ ಬೋಸ್ಕೋ ಮತ್ತು ಜಿಲ್ಲಾ ಕಾರಾಗೃಹದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಕಾರಾಗೃಹದಿಂದ ಬಿಡುಗಡೆ ಹೊಂದಿದ ನಂತರ ಸ್ವಾವಲಂಬಿ ಜೀವನ ನಡೆಸಲು ಇದೊಂದು ಉತ್ತಮ ಅವಕಾಶವಾಗಿದೆ. ಸಾಮಾನ್ಯವಾಗಿ ಸಮಾಜದಲ್ಲಿ ಕಾರಾಗೃಹದ ಬಗ್ಗೆ ತಪ್ಪು ಕಲ್ಪನೆ ಇದೆ. ಕಾರಾಗೃಹ ಎಂದರೆ ಶಿಕ್ಷೆ, ನೋವು, ಕತ್ತಲೆ ಮತ್ತು ಜೀವನದ ಅಂತ್ಯ ಎಂದು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ಕಾರಾಗೃಹದ ಉದ್ದೇಶ ಕೇವಲ ಶಿಕ್ಷೆ ನೀಡುವುದಲ್ಲ; ವ್ಯಕ್ತಿಯ ಸುಧಾರಣೆ, ಪುನರ್ವಸತಿ ಮತ್ತು ಆತನನ್ನು ಪುನಃ ಸಮಾಜದ ಮುಖ್ಯವಾಹಿನಿಗೆ ತರುವುದಾಗಿದೆ” ಎಂದರು. ಅಲ್ಲದೆ, ಬಂದಿಗಳ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹರಿಸಿದ ಅವರು, “ಯಾವುದೇ ತೊಂದರೆಗಳಿದ್ದರೆ ನೇರವಾಗಿ ಅಧೀಕ್ಷಕರನ್ನು ಸಂಪರ್ಕಿಸಬೇಕು” ಎಂದು ಹೇಳಿದರು.

ಬೀದರ್ ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಶಶಿಧರ ಬಡಿಗೇರ ಅವರು ಮಾತನಾಡಿ, “ಕಾರ್ಮೇಲ್ ಸೇವಾ ಟ್ರಸ್ಟ್ ಸಂಸ್ಥೆ, ಡಾನ್ ಬೋಸ್ಕೋ ಮತ್ತು ಜಿಲ್ಲಾ ಕಾರಾಗೃಹದ ಸಂಯುಕ್ತಾಶ್ರಯದಲ್ಲಿ ಇಂಟೀರಿಯರ್ ಎಲೆಕ್ಟ್ರಿಕಲ್ ಫಿಟ್ಟಿಂಗ್ ತರಬೇತಿಯ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ತರಬೇತಿ ಪಡೆಯುತ್ತಿರುವವರು ಹಾಗೂ ಪಡೆದ ಬಂದಿಗಳು ಇದರ ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಮೇಲ್ ಸೇವಾ ಟ್ರಸ್ಟ್‌ನ ಘಟಕ ನಿರ್ದೇಶಕರಾದ ಸಹೋದರಿ ಮೇರಿ ರೀಟಾ ಅವರು ಅತಿಥಿಗಳಾಗಿ ಭಾಗವಹಿಸಿ, ಎಲೆಕ್ಟ್ರಿಕಲ್ ಫಿಟ್ಟಿಂಗ್ ತರಬೇತಿ ಪೂರ್ಣಗೊಳಿಸಿದ ಕಾರಾಗೃಹದ 17 ಜನ ಬಂದಿಗಳಿಗೆ ಪ್ರಮಾಣಪತ್ರ ವಿತರಿಸಿದರು.

ಜೈಲರ್ ವಿಜಯಲಕ್ಷ್ಮಿ ಅವರು ಮಾತನಾಡಿ, “ಜೈಲಿನಲ್ಲಿ ಬಂದಿಗಳು ವೃತ್ತಿಪರ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಗಳ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರಾಗೃಹದ ಇತರೆ ಸಿಬ್ಬಂದಿ ಹಾಗೂ ಅನೇಕ ಬಂದಿಗಳು ಭಾಗವಹಿಸಿದ್ದರು. ಶಿಕ್ಷಕರಾದ ಸುರೇಶ್ ಟಾಳೆ ಕಾರ್ಯಕ್ರಮ ನಿರೂಪಿಸಿದರು, ಸಹಾಯಕ ಜೈಲರ್ ಆನಂದ್ ಮಿರಗಿ ವಂದಿಸಿದರು.

Leave a Reply

Your email address will not be published. Required fields are marked *

↑
Suddi Belaku