ಯಾದಗಿರಿ: ಜಿಲ್ಲೆಯ ಕಿಲ್ಲನಕೇರಾ ಗ್ರಾಮದಲ್ಲಿ ಮಹಿಳೆಯೊಬ್ಬರು ನೀಡಿರುವ ದೂರಿನ ಆಧಾರದ ಮೇಲೆ ಪತ್ರಕರ್ತ ಸೇರಿದಂತೆ ಹಲವು ಮಂದಿಯ ವಿರುದ್ಧ ದಾಖಲಿಸಿರುವ ಜಾತಿನಿಂದನೆ ಪ್ರಕರಣದ ಹಿಂದೆ ಮೂರನೇ ವ್ಯಕ್ತಿಗಳ ಕೈವಾಡವಿದೆಯೇ ಎಂಬುದನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸರ್ವ ಸಂಘಟನೆಗಳ ಹೋರಾಟ ಸಮಿತಿ ವತಿಯಿಂದ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ.
ಈರಮ್ಮ ಗಂಡ ಬಸವರಾಜ ಕೊರಮ ಅವರು ಆ.20ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಹಲವು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ದೂರುದಾರ ಮಹಿಳೆಗೆ ದೂರಿನಲ್ಲಿರುವ ಆರೋಪಗಳು ಹಾಗೂ ತಾನು ಯಾರ ವಿರುದ್ಧ ದೂರು ನೀಡುತ್ತಿದ್ದೇನೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇತ್ತೇ ಎಂಬುದನ್ನು ತನಿಖೆ ಮೂಲಕ ಸ್ಪಷ್ಟಪಡಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.
ಮಹಿಳೆಯೊಂದಿಗೆ ನಡೆದ ಸಂಭಾಷಣೆಯ ಆಡಿಯೊ ದಾಖಲೆ ತಮ್ಮ ಬಳಿ ಇದ್ದು, ಅದರಲ್ಲಿ ಪ್ರಕರಣದ ಕುರಿತು ತನಗೆ ಸಂಪೂರ್ಣ ಮಾಹಿತಿ ಇಲ್ಲ ಎಂಬ ಅರ್ಥದ ಹೇಳಿಕೆ ಕೇಳಿಬರುತ್ತದೆ ಎಂದು ಹೋರಾಟಗಾರರು ತಿಳಿಸಿದ್ದಾರೆ. ಬೇರೆಯವರು ಸಿದ್ಧಪಡಿಸಿದ ದೂರಿನ ಮೇಲೆ ಮಹಿಳೆಯಿಂದ ಹೆಬ್ಬೆಟ್ಟು ಪಡೆಯಲಾಗಿದೆ ಎಂಬ ಆರೋಪವನ್ನೂ ಮಾಡಿದ್ದಾರೆ.
ದೂರುದಾರ ಮಹಿಳೆಯನ್ನು ಯಾವುದೇ ಒತ್ತಡವಿಲ್ಲದೆ ಸ್ವತಂತ್ರವಾಗಿ ವಿಚಾರಣೆ ನಡೆಸಿ, ಆಕೆಯ ಮೂಲ ಹೇಳಿಕೆಯನ್ನು ಪ್ರತ್ಯೇಕವಾಗಿ ದಾಖಲಿಸಬೇಕು. ಸಾಧ್ಯವಾದರೆ ವಿಚಾರಣೆಯನ್ನು ವಿಡಿಯೊ ಚಿತ್ರೀಕರಿಸಬೇಕು. ದೂರು ದಾಖಲಾದ ಸಂದರ್ಭದಲ್ಲಿ ಠಾಣೆಯಲ್ಲಿ ಯಾರು ಹಾಜರಿದ್ದರು, ದೂರನ್ನು ಯಾರು ಬರೆದುಕೊಟ್ಟರು ಹಾಗೂ ಹೇಳಿಕೆಯನ್ನು ಯಾರು ದಾಖಲಿಸಿದರು ಎಂಬುದನ್ನು ಪರಿಶೀಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಾಮಾಜಿಕ ಬಹಿಷ್ಕಾರದಂತಹ ಸಾರ್ವಜನಿಕ ಹಿತಾಸಕ್ತಿಯ ವಿಷಯವನ್ನು ವರದಿ ಮಾಡಿದ್ದ ಪತ್ರಕರ್ತನ ವಿರುದ್ಧ ಪ್ರತೀಕಾರದ ರೀತಿಯಲ್ಲಿ ಕೌಂಟರ್ ಪ್ರಕರಣ ದಾಖಲಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಕೇವಲ ಸುದ್ದಿ ಪ್ರಕಟಿಸಿದ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿದೆಯೇ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.
‘ಯಾರನ್ನೂ ರಕ್ಷಿಸುವುದು ಅಥವಾ ಗುರಿಯಾಗಿಸುವುದು ಹೋರಾಟದ ಉದ್ದೇಶವಲ್ಲ. ಸತ್ಯ ಹೊರಬಂದು ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಹಾಗೂ ನಿರಪರಾಧಿಗಳಿಗೆ ನ್ಯಾಯ ದೊರೆಯಬೇಕು’ ಎಂದು ಅವರು ತಿಳಿಸಿದ್ದಾರೆ.
ಪ್ರಕರಣಕ್ಕೆ ವಿಶೇಷ ತನಿಖಾ ತಂಡ ರಚಿಸಿ, ದೂರುದಾರರ ಹೇಳಿಕೆ, ಆಡಿಯೊ ದಾಖಲೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಪರಿಶೀಲಿಸಬೇಕು. ತನಿಖೆಯಲ್ಲಿ ತಪ್ಪು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಧರಣಿಗೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೋಸಿ, ಅನಿಲಕುಮಾರ ಕರಾಟೆ, ಮೈಲಾರಪ್ಪ ಜಾಗೀರದಾರ, ಶಿವರಾಜ ದಾಸನಕೇರಿ, ವೀರೇಶ ಸಜ್ಜನ್ ಕಡೆಚೂರು, ವಿಜಯ ಪಾಟೀಲ್, ಶಶಾಂಕ ನಾಯಕ, ವಿಶ್ವನಾಥ ನೀಲಹಳ್ಳಿ, ಸುರೇಶಗೌಡ ಅಲ್ಲಿಪುರ, ಭೀಮರಾಯ ಭಂಡಾರಿ, ಶಿವಕುಮಾರ ಮುನಗಾಲ, ಮಲ್ಲು ಪೂಜಾರಿ ಸೇರಿದಂತೆ ಹಲವರು ಬೆಂಬಲ ಸೂಚಿಸಿದರು.
Leave a Reply