ಸುದ್ದಿ ಬೆಳಕು ವಾರ್ತೆ
ಯಾದಗಿರಿ: ನಗರದ ಪ್ರಮುಖ ಜನಸಂದಣಿ ಪ್ರದೇಶವಾಗಿರುವ ಹತಿಕುಣಿ ಕ್ರಾಸ್ ರಸ್ತೆಯನ್ನು ಅಗಲೀಕರಣಗೊಳಿಸುವ ಕಾಮಗಾರಿಗೆ ಜಿಲ್ಲಾಡಳಿತ ಮುಂದಾಗಿದ್ದು, ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾದಗಿರಿ ತಾಲೂಕು ಹಾಗೂ ಸೇಡಂ ಭಾಗಗಳಿಂದ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿವಿಧ ಕೆಲಸಗಳಿಗಾಗಿ ನಗರಕ್ಕೆ ಆಗಮಿಸುತ್ತಿದ್ದು, ಹತಿಕುಣಿ ಕ್ರಾಸ್ ಮಾರ್ಗದಲ್ಲಿ ವಾಹನಗಳ ಸಂಚಾರವೂ ಹೆಚ್ಚಾಗಿದೆ. ರಸ್ತೆ ಬದಿಯ ಜಾಗಗಳಲ್ಲಿ ಹಲವು ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ರಸ್ತೆ ಅಗಲೀಕರಣದ ಅಗತ್ಯ ಎದುರಾಗಿತ್ತು.
ಈ ಸಮಸ್ಯೆಯನ್ನು ಗಮನಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ನಗರಸಭೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಕೆಕೆಆರ್ಡಿಬಿಯಿಂದ ₹5 ಕೋಟಿ ವೆಚ್ಚದಲ್ಲಿ ಹತಿಕುಣಿ ಕ್ರಾಸ್ನಿಂದ ಗಂಗಾನಗರದವರೆಗೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕ್ರಮ ಕೈಗೊಂಡಿದ್ದಾರೆ. ರಸ್ತೆ ಅಭಿವೃದ್ಧಿ, ಡಾಂಬರೀಕರಣ, ಚರಂಡಿ ನಿರ್ಮಾಣ, ರಸ್ತೆ ವಿಭಜಕ ಹಾಗೂ ಎರಡೂ ಬದಿಗಳಲ್ಲಿ ಸ್ಟ್ರೀಟ್ಲೈಟ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸುಮಾರು ಮೂರು ತಿಂಗಳ ಹಿಂದೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಇದೀಗ ನಗರಸಭೆ ಅಧಿಕಾರಿಗಳು ಹತಿಕುಣಿ ಕ್ರಾಸ್ನಿಂದ ಸೇಡಂ ಕಡೆಗೆ ತೆರಳುವ ರಾಜ್ಯ ಹೆದ್ದಾರಿ ಮಾರ್ಗದ ಎರಡೂ ಬದಿಗಳಲ್ಲಿರುವ ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಶನಿವಾರ ನಗರಸಭೆ ಆಯುಕ್ತ ಉಮೇಶ್ ಚವಾಣ್ ನೇತೃತ್ವದಲ್ಲಿ ಇಂಜಿನಿಯರ್ಗಳ ತಂಡ ಸ್ಥಳಕ್ಕೆ ಭೇಟಿ ನೀಡಿ, ರಸ್ತೆಯ ಮಧ್ಯಭಾಗದಿಂದ ಎಡ ಹಾಗೂ ಬಲ ಭಾಗದಲ್ಲಿ ತಲಾ 50 ಅಡಿ ಜಾಗವನ್ನು ರಸ್ತೆ ಅಭಿವೃದ್ಧಿಗಾಗಿ ಗುರುತಿಸಿದೆ.













Leave a Reply