ಯಾದಗಿರಿಯಲ್ಲಿ ಗಣೇಶೋತ್ಸವದ ಡಿಜೆ ನಿಷೇಧಕ್ಕೆ ಶಿವಸೇನಾ ಆಕ್ರೋಶ: 48 ಗಂಟೆ ಗಡುವು

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಉತ್ಸವದ ಸಂದರ್ಭದಲ್ಲಿ ಡಿಜೆ ಮತ್ತು ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹೊರಡಿಸಿರುವ ಕಟ್ಟುನಿಟ್ಟಿನ ಸೂಚನೆಗಳ ವಿರುದ್ಧ ಶಿವಸೇನಾ ಪಕ್ಷ ಆಕ್ರೋಶ ವ್ಯಕ್ತಪಡಿಸಿದ್ದು, ಆದೇಶವನ್ನು 48 ಗಂಟೆಯೊಳಗೆ ಹಿಂಪಡೆಯಬೇಕು. ಇಲ್ಲವಾದರೆ ಜಿಲ್ಲಾಡಳಿತದ ಕಚೇರಿ ಎದುರು ಗಣೇಶ ಮೂರ್ತಿಯೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಯಾದಗಿರಿ ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿವಸೇನಾ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಾಂಕ ನಾಯಕ, ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಕನ್ಯೆಕೊಳ್ಳುರು, ದಂಡಗುಂಡ ಮಠದ ವಿದ್ಯಾನಂದ ಸ್ವಾಮೀಜಿ ಹಾಗೂ ಪಿಲಿಂಗ ಅಂಬಿಗರ ಮಾತನಾಡಿ, “ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಉಗ್ರರಂತೆ ನೋಡಬಾರದು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಹಾಗೂ ಧ್ವನಿವರ್ಧಕಗಳ ಶಬ್ದ ಮಿತಿ ಮೀರುತ್ತದೆ ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿರುವುದು ಉತ್ಸವದಲ್ಲಿ ತೊಡಗಿರುವ ಯುವಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಉತ್ಸವದ ಸಿದ್ಧತೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳ ಮೇಲೂ ಪ್ರಕರಣ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಹೀಗಾಗಿ ಇಂತಹ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

“ಶಬ್ದ ಮಾಲಿನ್ಯ ನಿಯಮಗಳು ಎಲ್ಲ ಧರ್ಮಗಳಿಗೂ ಸಮಾನವಾಗಿ ಅನ್ವಯವಾಗಬೇಕು. ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಕುರಿತೂ ಇದೇ ರೀತಿಯ ಶಬ್ದಮಿತಿ ನಿಯಮಗಳನ್ನು ಸಮಾನವಾಗಿ ಜಾರಿಗೊಳಿಸಲಾಗುತ್ತಿದೆಯೇ ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು” ಎಂದು ಪ್ರಶ್ನಿಸಿದರು.

ಗಣೇಶೋತ್ಸವದ ಸಂದರ್ಭದಲ್ಲಿ ಮಾತ್ರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಹಿಂದೂಗಳ ಹಬ್ಬವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂಬುದು ತಮ್ಮ ಆರೋಪವಾಗಿದೆ ಎಂದು ಅವರು ಹೇಳಿದರು.

“ಸುಪ್ರೀಂ ಕೋರ್ಟ್‌ನ ಆದೇಶ ಹಾಗೂ ಶಬ್ದ ಮಾಲಿನ್ಯ ನಿಯಮಗಳು ಎಲ್ಲರಿಗೂ ಒಂದೇ ಆಗಿದ್ದರೆ, ಅದರ ಅನುಷ್ಠಾನವೂ ಎಲ್ಲೆಡೆ ಸಮಾನವಾಗಿರಬೇಕು. ಗಣೇಶೋತ್ಸವದ ಮೇಲೆಯೇ ಕಠಿಣ ಕ್ರಮ ಏಕೆ? ಜಿಲ್ಲಾಡಳಿತ ಇದಕ್ಕೆ ಸ್ಪಷ್ಟ ಉತ್ತರ ನೀಡಬೇಕು” ಎಂದು ಆಗ್ರಹಿಸಿದರು.

ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದ ಆದೇಶವನ್ನು ಹಿಂಪಡೆಯಲು ಜಿಲ್ಲಾಡಳಿತಕ್ಕೆ 48 ಗಂಟೆಗಳ ಗಡುವು ನೀಡಲಾಗಿದ್ದು, ಗಡುವಿನೊಳಗೆ ಆದೇಶ ಹಿಂಪಡೆಯದಿದ್ದರೆ ಜಿಲ್ಲಾಡಳಿತದ ಕಚೇರಿ ಎದುರು ಗಣೇಶ ಮೂರ್ತಿಯೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಶಿವಸೇನಾ ಮುಖಂಡರು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

↑
Suddi Belaku