ಗೌರಿ ಗಣೇಶ ಹಬ್ಬದ ಖರೀದಿ ಭರಾಟೆ: ಸಂತೆಗಳಲ್ಲಿ ಜನಜಂಗುಳಿ, ಮಡಕೆ ವ್ಯಾಪಾರ ಜೋರು

Posted by

–

ಸುದ್ದಿ ಬೆಳಕು ವಾರ್ತೆ

ಯಳಂದೂರು : ಗೌರಿ ಗಣೇಶಹಬ್ಬದ ನಿಮಿತ್ತ ಭಾನುವಾರ ಪಟ್ಟಣದ ಸಂತೆಮೈದಾನ, ಹಳೇ ಅಂಚೆ ಕಚೇರಿ ರಸ್ತೆ, ಸೊಸೈಟಿ ಬೀದಿ, ದೊಡ್ಡಅಂಗಡಿ ಬೀದಿಯಲ್ಲೂ ಸಂತೆ ಕಟ್ಟಿದ್ದು ವಿಶೇಷವಾಗಿತ್ತು. ಖರೀದಿದಾರರು ಮುಗಿಬಿದ್ದು ಹಬ್ಬದ ಖರೀದಿಯಲ್ಲಿ ತೊಡಗಿದ್ದರು.

ತರಕಾರಿ, ಹಣ್ಣು, ಕಾಯಿ, ಬಾಳೆ ಎಲೆ, ಮಾವಿನಸೊಪ್ಪು ಸೇರಿದಂತೆ ಪೂಜಾ ಸಾಮಾಗ್ರಿಗಳ ಖರೀದಿ ಜೋರಾಗಿತ್ತು. ಹೂವಿನ ಬೆಳೆ ಹೆಚ್ಚಿದ್ದರೂ ಬೇಡಿಕೆ ಅಪಾರವಾಗಿದ್ದರಿಂದ ಹೂವು ಹಾಗೂ ಹಾರಗಳ ಖರೀದಿಯ ಭರಾಟೆಯೂ ಹೆಚ್ಚಾಗಿತ್ತು. ಪಟ್ಟಣದಲ್ಲಿ

ಸಂಚಾರÀ ದಟ್ಟಣೆ: ಸಂತೆ ಹಳೇ ಅಂಚೆ ಕಚೇರಿಯ ರಸ್ತೆಯಲ್ಲಿ ಇದ್ದರಿಂದ ಈ ರಸ್ತೆ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ಬಂದ್ ಆಗಿತ್ತು. ಹಾಗಾಗಿ ದೊಡ್ಡ ಅಂಗಡಿ ಬೀದಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಇದೇ ರಸ್ತೆಯಲ್ಲಿ ಬಳೇಪೇಟೆ, ಬಿಳಿಗಿರಿರಂಗನಬೆಟ್ಟ, ಕಾಗಲವಾಡಿ ಮಾರ್ಗವಾಗಿ ಚಾಮರಾಜನಗರಕ್ಕೆ ತೆರಳುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಗಣೇಶ ಮೂರ್ತಿಗಳ ಮಾರಾಟ ಮಳಿಗೆಗಳಲ್ಲೂ ಕೂಡ ವ್ಯಾಪಾರದ ಭರಾಟೆ ಜೋರಾಗಿತ್ತು. ತರಕಾರಿ ಕಾಲಿಪಲ್ಯಗಳನ್ನು ಖರೀದಿಯೂ ಜೋರಾಗಿತ್ತು.

ಕುದುರಿದ ಮಡಕೆ ವ್ಯಾಪಾರ; ಗೌರಿ ಹಬ್ಬಕ್ಕೆ ಹೊಸ ಮಡಕೆಗಳನ್ನು ಖರೀದಿಸಿ ಇದರಲ್ಲಿ ಅಡುಗೆ ತಯಾರಿಸಿ ಉಣಬಡಿಸುವ ಸಂಪ್ರದಾಯ ಇನ್ನೂ ಜೀವಂತವಾಗಿದೆ. ಇದರ ನಿಮಿತ್ತ ಸಂತೆಯ ಒಂದು ಬದಿಯಲ್ಲಿ ಮಣ್ಣಿನ ಮಡಕೆ ಹಾಗೂ ಒಲೆಗಳ ಮಾರಾಟವೂ ಜೋರಾಗಿತ್ತು. ಖರೀದಿದಾರರು ಮಡಕೆಯನ್ನು ಕೊಳ್ಳಲು ಚೌಕಾಸಿ ಮಾಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಾಣ ಸಿಗುತ್ತಿತ್ತು.

‘ಮಡಕೆ ಖರೀದಿ ಮಾಡುವವರ ಸಂಖ್ಯೆ ಗೌರಿ ಹಬ್ಬಕ್ಕೆ ಮಾತ್ರ ಇರುತ್ತದೆ. ಈ ಹಿಂದೆ ಪಟ್ಟಣದ ಕುಂಬಾರ ಬೀದಿಯಲ್ಲಿ ಮಡಕೆ ತಯಾರುವ ಮಾಡುವ ನಮ್ಮದೇ ಭಟ್ಟಿಗಳಿದ್ದವು. ಆದರೆ ಈಚೆಗೆ ಕುಂಬಾರಿಕೆ ನೇಪಥ್ಯಕ್ಕೆ ಸರಿಯುತ್ತಿರುವ ಹಿನ್ನೆಲೆಯಲ್ಲಿ ನಾವು ಟಿ. ನರಸೀಪುರ, ಆಲಗೂಡಿನಿಂದ ಮಡಕೆ ತಂದು ಮಾರಾಟ ಮಾಡುತ್ತಿದ್ದೇವೆ ಒಂದಕ್ಕೆ ಅದರ ಅಳತೆಯ ಆಧಾರದ ಮೇಲೆ ರೂ. 60 ರಿಂದ 100 ರ ವರೆಗೆ ಮಾರಾಟ ಮಾಡುತ್ತೇವೆ. ಧೂಪದ ಕುಡಿಕೆ 30 ರೂ, ದೀಪ 5 ರಿಂದ 6 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ನಮ್ಮ ಲಾಭದ ಪ್ರಮಾಣವೂ ಕಡಿಮೆಯಾಗಿದೆ’ ಎಂದು ಮಾರಾಟಗಾರರಾದ, ಅಲಮೇಲಮ್ಮ, ರಘು ಮತ್ತು ರೂಪ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

↑
Suddi Belaku