ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷರಾಗಿ ರಾಜಶೇಖರಗೌಡ ವಜ್ಜಲ್ ನೇಮಕ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಕರ್ನಾಟಕ ರಾಜ್ಯ ಶಿವಶರಣ ಹೇಮರೆಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜ (ರಿ.), ಬೆಂಗಳೂರು ಇದರ ಯಾದಗಿರಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನಾಗಿ ಸಮಾಜದ ಹಿರಿಯ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ತಿಳಿಸಿದ್ದಾರೆ.

ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ವೀರಶೈವ ಲಿಂಗಾಯತ ರೆಡ್ಡಿ ಸಮಾಜಕ್ಕೆ ರಾಜ್ಯ ಮತ್ತು ದೇಶದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಂತ ಭವ್ಯವಾದ ಇತಿಹಾಸವಿದೆ. ರಾಜಶೇಖರಗೌಡ ಪಾಟೀಲ ವಜ್ಜಲ್ ಅವರು ಸಾರ್ವಜನಿಕ ರಂಗದಲ್ಲಿ ಅಪಾರ ಅನುಭವ ಹೊಂದಿದವರಾಗಿದ್ದು, ಮೊದಲಿನಿಂದಲೂ ಸಮಾಜದ ವಿವಿಧ ಹಂತದ ಸಂಘಟನಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಿಂತು ಕ್ರಿಯಾಶೀಲವಾಗಿ ಸೇವೆ ಸಲ್ಲಿಸಿದ್ದಾರೆ. ಸಮಾಜದ ಹಿರಿಯರು ಹಾಗೂ ಯುವಪೀಳಿಗೆಯೊಂದಿಗೆ ಸರಳವಾಗಿ ಬೆರೆಯುವ ಅಪರೂಪದ ವ್ಯಕ್ತಿತ್ವ ಅವರದ್ದಾಗಿದೆ,” ಎಂದು ಶ್ಲಾಘಿಸಿದ್ದಾರೆ.

ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಸೇರಿದಂತೆ ಜಿಲ್ಲೆಯ ಹಿರಿಯ ಮುಖಂಡರು, ಮುಂಚೂಣಿ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಒಮ್ಮತದೊಂದಿಗೆ ಈ ನೇಮಕಾತಿ ಆದೇಶ ಹೊರಡಿಸಲಾಗಿದೆ. ಮುಂಬರುವ ದಿನಗಳಲ್ಲಿ ರಾಜಶೇಖರಗೌಡ ಪಾಟೀಲ ವಜ್ಜಲ್ ಅವರು ಯಾದಗಿರಿ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು, ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸಿ, ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗೆ ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದು ಶೇಖರಗೌಡ ಮಾಲಿಪಾಟೀಲ ಆಶಯ ವ್ಯಕ್ತಪಡಿಸಿದ್ದಾರೆ.

You Might Also Like

Leave a Reply

Your email address will not be published. Required fields are marked *

Suddi Belaku