ಪರಿಸರ ಸ್ನೇಹಿ ಗಣಪತಿ: ವಿದ್ಯಾರ್ಥಿಗಳಿಂದ ಜಾಗೃತಿ ಕರೆ | ಯಾದಗಿರಿ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಪರಿಸರ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಬಳಕೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಲ್ಲಿಕಾ ಶಿಕ್ಷಣ ಸಂಸ್ಥೆ, ಯಾದಗಿರಿಯಲ್ಲಿ ಗುರುವಾರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಗಣ್ಯ ಅತಿಥಿಗಳ ಆಗಮನದ ಬಳಿಕ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಲಾಯಿತು. ನಂತರ “ಪರಿಸರ ಸ್ನೇಹಿ ಗಣಪತಿ – ನಮ್ಮ ಜವಾಬ್ದಾರಿ” ಎಂಬ ವಿಷಯದ ಕುರಿತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ನಡೆಯಿತು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಮಣ್ಣಿನ ಗಣಪತಿ ಮೂರ್ತಿಗಳ ಮಹತ್ವ, ರಾಸಾಯನಿಕ ಬಣ್ಣಗಳಿಂದ ಉಂಟಾಗುವ ಮಾಲಿನ್ಯ ಹಾಗೂ ಪರಿಸರ ಸ್ನೇಹಿ ಆಚರಣೆಗಳ ಅಗತ್ಯತೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ SCAET ಸಂಸ್ಥಾಪಕರು ಹಾಗೂ ಗೌರವಾಧ್ಯಕ್ಷರಾದ ಶ್ರೀ ಹನುಮಂತಪ್ಪ ಸಿರಗೋಳ, ಯಾದಗಿರಿಯ ನಿವೃತ್ತ ಶಿಕ್ಷಕರಾದ ಶ್ರೀ ಶರಣಪ್ಪ ಕ್ಯಾತನಾಳ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಕಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಸರೋಜಾ R. ದಯಾಳ್ ಅವರು ವಹಿಸಿದ್ದರು. ಮಲ್ಲಿಕಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಲ್ಲಿಕಾರ್ಜುನ ಗೋಸಿ ಉಪಸ್ಥಿತರಿದ್ದರು.
ಭಾಷಣ ಸ್ಪರ್ಧೆಯ ನಿರ್ಣಯ ಮಂಡಳಿಯ ಸದಸ್ಯರಾಗಿ ಕು. ಮಹಿಮುನ್ನಿ ಹಾಗೂ ಶ್ರೀ ಹಣಮಂತ ನಾಟೇಕಾರ್ ಉಪನ್ಯಾಸಕರು ಕಾರ್ಯನಿರ್ವಹಿಸಿದರು.
ನಂತರ ನಡೆದ ಅತಿಥಿಗಳ ಭಾಷಣದಲ್ಲಿ ಶ್ರೀ ಹನುಮಂತಪ್ಪ ಸಿರಗೋಳ ಅವರು ವಿದ್ಯಾರ್ಥಿಗಳು ಪರಿಸರದ ಬಗ್ಗೆ ಜಾಗೃತರಾಗುವುದರ ಜೊತೆಗೆ ಸಮಾಜದಲ್ಲಿಯೂ ಪರಿಸರ ಸಂರಕ್ಷಣೆಯ ಸಂದೇಶವನ್ನು ಹರಡಬೇಕು ಎಂದು ಹೇಳಿದರು.
ಅಧ್ಯಕ್ಷರ ನುಡಿಯಲ್ಲಿ ಶ್ರೀಮತಿ ಸರೋಜಾ R. ದಯಾಳ್ ಅವರು ಪರಿಸರ ಸ್ನೇಹಿ ಆಚರಣೆಗಳಿಗೆ ಶಿಕ್ಷಣ ಸಂಸ್ಥೆಗಳು ಆದ್ಯತೆ ನೀಡಬೇಕು ಹಾಗೂ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಮಲ್ಲಿಕಾರ್ಜುನ ಶಿರಗೋಳ ಅವರು ವಂದನಾರ್ಪಣೆ ಸಲ್ಲಿಸಿದರು.
ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ ಈ ಕಾರ್ಯಕ್ರಮವು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

You Might Also Like

Leave a Reply

Your email address will not be published. Required fields are marked *

Suddi Belaku