
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ ಶಹಾಪುರ ತಾಲೂಕೊಂದನ್ನೇ ಬರಪೀಡಿತ ಎಂದು ಘೋಷಿಸಿ, ಉಳಿದ ಯಾದಗಿರಿ, ಗುರುಮಠಕಲ್, ವಡಗೇರಾ, ಸುರಪುರ ಹಾಗೂ ಹುಣಸಗಿ ತಾಲೂಕುಗಳನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಜಿಲ್ಲೆಯ ಉಳಿದ ಐದು ತಾಲೂಕುಗಳನ್ನೂ ಕೂಡಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರವೇ ಯಾದಗಿರಿ ತಾಲೂಕು ಘಟಕದ ವತಿಯಿಂದ ಗುರುವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕರವೇ ಮುಖಂಡ ಮಲ್ಲು ಮಾಳಿಕೇರಿ ಮಾತನಾಡಿ, ‘ಶಹಾಪುರ ತಾಲೂಕೊಂದನ್ನೇ ಬರಪೀಡಿತ ಎಂದು ಘೋಷಿಸಿರುವ ಸರ್ಕಾರ, ಉಳಿದ ಐದು ತಾಲೂಕುಗಳ ರೈತರ ಪಾಲಿಗೆ ಗಾಯದ ಮೇಲೆ ಬರೆ ಎಳೆದಿದೆ. ಮಳೆ ಕೊರತೆಯಿಂದ ಬೆಳೆಗಳು ಹಾನಿಯಾಗಿರುವ ವಾಸ್ತವ ಸ್ಥಿತಿಯನ್ನು ಪರಿಗಣಿಸಿ ತಕ್ಷಣ ಬರ ಘೋಷಣೆ ಮಾಡಬೇಕು’ ಎಂದು ಆಗ್ರಹಿಸಿದರು.
ಜೂನ್ ಮೊದಲ ವಾರದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಆಶಾಭಾವನೆಯೊಂದಿಗೆ ಬಿತ್ತನೆ ಕೈಗೊಂಡಿದ್ದರು. ಜಿಲ್ಲೆಯ ಬಹುತೇಕ ಕಡೆ ಶೇ.90ರಷ್ಟು ಬಿತ್ತನೆ ಪೂರ್ಣಗೊಂಡಿತ್ತು. ಆದರೆ ಜೂನ್ ಅಂತ್ಯದಿಂದ ಜುಲೈ ಮೊದಲ ವಾರದವರೆಗೆ ಮಳೆ ಕೈಕೊಟ್ಟ ಪರಿಣಾಮ ಹೆಸರು, ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳಿಗೆ ಅಗತ್ಯ ತೇವಾಂಶ ದೊರೆಯದೆ ಮೊಳಕೆಯಲ್ಲಿಯೇ ಭಾರಿ ನಷ್ಟ ಉಂಟಾಗಿದೆ. ಶೇ.50ರಷ್ಟು ಮಾತ್ರ ಮೊಳಕೆಯಾಗಿದ್ದು, ಉಳಿದ ಭಾಗದಲ್ಲಿ ಮೊಳಕೆ ಬಾರದ ಹಿನ್ನೆಲೆಯಲ್ಲಿ ರೈತರು ಮತ್ತೆ ಬಿತ್ತನೆ ಮಾಡಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಪ್ರತಿಭಟನಾಕಾರರು ವಿವರಿಸಿದರು.
ಒಣ ಬೇಸಾಯಕ್ಕೆ ಎಕರೆಗೆ ₹30ರಿಂದ ₹40 ಸಾವಿರ ಹಾಗೂ ನೀರಾವರಿ ಪ್ರದೇಶದಲ್ಲಿ ₹45ರಿಂದ ₹50 ಸಾವಿರದವರೆಗೆ ಖರ್ಚು ಮಾಡಿರುವ ರೈತರು ಇದೀಗ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಬೆಳೆ ಕೈಕೊಟ್ಟಿರುವುದರಿಂದ ರೈತರು ಮಾತ್ರವಲ್ಲದೆ ಕೃಷಿ ಕೂಲಿಕಾರ್ಮಿಕರೂ ಸಂಕಷ್ಟಕ್ಕೆ ಸಿಲುಕಿದ್ದು, ಉದ್ಯೋಗ ಅರಸಿ ಬೆಂಗಳೂರು, ಮುಂಬೈ ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
‘ವೈಜ್ಞಾನಿಕ ವರದಿ ಸಲ್ಲಿಸುವಲ್ಲಿ ಜಿಲ್ಲಾಡಳಿತ ವಿಫಲ’
ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಮಾತನಾಡಿ, ಶಹಾಪುರ ತಾಲೂಕೊಂದನ್ನೇ ಬರಪೀಡಿತ ಎಂದು ಘೋಷಿಸಿರುವುದು ಜಿಲ್ಲೆಯ ಇತರ ತಾಲೂಕುಗಳ ರೈತರಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮಳೆ ಕೊರತೆಯಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಅಂತರ್ಜಲ ಮಟ್ಟ ಕುಸಿದಿದೆ. ರೈತರು ಮತ್ತು ಕೃಷಿ ಕೂಲಿಕಾರ್ಮಿಕರಿಗೆ ಕೆಲಸವಿಲ್ಲ. ಸಾವಿರಾರು ಕುಟುಂಬಗಳು ಜೀವನೋಪಾಯಕ್ಕಾಗಿ ಬೆಂಗಳೂರು, ಮುಂಬೈ ಕಡೆ ವಲಸೆ ಹೋಗುತ್ತಿವೆ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಬರಗಾಲದ ವಾಸ್ತವ ಸ್ಥಿತಿಯನ್ನು ವೈಜ್ಞಾನಿಕವಾಗಿ ಸರ್ಕಾರದ ಗಮನಕ್ಕೆ ತರುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿವೆ’ ಎಂದು ಆರೋಪಿಸಿದರು.
ಉಳಿದ ಐದು ತಾಲೂಕುಗಳನ್ನು ಕೂಡಲೇ ಬರಪೀಡಿತ ಎಂದು ಘೋಷಿಸಿ, ರಾಜ್ಯದ ಎಸ್ಡಿಆರ್ಎಫ್ ಹಾಗೂ ಕೇಂದ್ರದ ಎನ್ಡಿಆರ್ಎಫ್ ನಿಯಮಗಳಡಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಒಣ ಬೇಸಾಯದ ಪ್ರತಿ ಎಕರೆಗೆ ₹25ರಿಂದ ₹30 ಸಾವಿರ ಹಾಗೂ ನೀರಾವರಿ ಪ್ರದೇಶದ ಪ್ರತಿ ಎಕರೆಗೆ ₹45ರಿಂದ ₹50 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸೆ.15ರಂದು ಹೆದ್ದಾರಿ ಬಂದ್ ಎಚ್ಚರಿಕೆ
ರಾಜ್ಯ ಸರ್ಕಾರ ಶೀಘ್ರದಲ್ಲಿ ಯಾದಗಿರಿ ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ರೈತರ ನೆರವಿಗೆ ಧಾವಿಸದಿದ್ದರೆ ಸೆ.15ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಿದ್ದುನಾಯಕ ಹತ್ತಿಕುಣಿ, ನಿಂಗಪ್ಪ ಗುಡಗುಡಿ, ವಿಶ್ವರಾಜ ಪಾಟೀಲ್, ಸಿದ್ದಪ್ಪ ಕೂಯಿಲೂರ, ಭೀಮರಾಯ ರಾಮಸಮುದ್ರ, ಸಿದ್ದಪ್ಪ ಕ್ಯಾಸಪನಳ್ಳಿ, ಅಶೋಕ ನಾಯಕ, ಸುಭಾಷ ಯರಗೋಳ, ವೆಂಕಟರಾಮುಲು ಸೈದಾಪುರ, ಸುರೇಶ ಬೆಳಗುಂದಿ, ಜನಾರ್ದನ ಬಡಿಗೇರಾ, ಮಹೇಶ ಠಾಣಗುಂದಿ ಸೇರಿದಂತೆ ಹಲವು ಮುಖಂಡರು, ಕರವೇ ಕಾರ್ಯಕರ್ತರು ಹಾಗೂ ರೈತರು ಪಾಲ್ಗೊಂಡಿದ್ದರು.












Leave a Reply