ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪಡೆದ ಉಮೇಶ್ ಮುದ್ನಾಳ್‌ಗೆ ಯಾದಗಿರಿಯಲ್ಲಿ ಸನ್ಮಾನ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ  : ಯಾದಗಿರಿ ಜಿಲ್ಲೆಯಾದ್ಯಂತ ನಗರ ಹಾಗೂ ಗ್ರಾಮೀಣ ಭಾಗದ ಜನಸಾಮಾನ್ಯರು, ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಖ್ಯಾತ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಅವರಿಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರತಿಷ್ಠಿತ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ಲಭಿಸಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಪ್ರಭು ಅಂಬಿಗರ್ ಕೊಡಲ್ ತಿಳಿಸಿದರು.

ನಗರದ ಚಿತ್ತಾಪುರ ರಸ್ತೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಮೂರ್ತಿಗೆ ಅಭಿಮಾನಿ ಬಳಗದ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ, ಉಮೇಶ್ ಕೆ. ಮುದ್ನಾಳ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. “ಉಮೇಶ್ ಮುದ್ನಾಳ್ ಅವರು ಹಲವು ವರ್ಷಗಳಿಂದ ನಗರ ಮತ್ತು ಗ್ರಾಮೀಣ ಭಾಗದ ಜನರ ಪರವಾಗಿ ಸಾಮಾಜಿಕ ನ್ಯಾಯ, ಸಾರ್ವಜನಿಕ ಹಿತಾಸಕ್ತಿ ಹಾಗೂ ಮೂಲಸೌಕರ್ಯಗಳ ಕೊರತೆ ವಿರುದ್ಧ ನಿಷ್ಪಕ್ಷಪಾತವಾಗಿ ಜನಪರ ಚಳವಳಿಗಳನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಈ ನಿಸ್ವಾರ್ಥ ಸೇವೆಗೆ ಅರ್ಹವಾಗಿಯೇ ಈ ಪ್ರಶಸ್ತಿ ಸಂದಿದೆ,” ಎಂದರು.

ಮುಖಂಡ ಆಂಜನೇಯ ಬೆಳಗೇರಾ ಮಾತನಾಡಿ, “ಕಟ್ಟಕಡೆಯ ಬಡವರ ಮತ್ತು ಕೂಲಿಕಾರ್ಮಿಕರ ಸಮಸ್ಯೆಗಳಿಗೆ ಹಗಲಿರುಳು ಸ್ಪಂದಿಸುವ ಅವರ ಸಾಮಾಜಿಕ ಕಾಳಜಿಗೆ ಸಂದ ಮನ್ನಣೆ ಇದಾಗಿದೆ. ಇಂತಹ ಪ್ರಶಸ್ತಿಗಳು ಜನಪರ ಹೋರಾಟಗಾರರಿಗೆ ಮತ್ತಷ್ಟು ಉತ್ಸಾಹ ಮತ್ತು ಸಮಾಜ ಸೇವೆಯ ಪ್ರೇರಣೆ ನೀಡಲಿವೆ,” ಎಂದು ಹರ್ಷ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್, “ರಾಜ್ಯ ಮಟ್ಟದಲ್ಲಿ ಗುರುತಿಸಿ ನೀಡಿರುವ ಈ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಸನ್ಮಾನವು ಸಮಾಜದ ಮೇಲಿನ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಜನತೆ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ. ಯಾವುದೇ ರಾಜಕೀಯ ಪಕ್ಷಪಾತವಿಲ್ಲದೆ ರೈತರು, ಶೋಷಿತರು ಹಾಗೂ ಬಡವರ ಹಕ್ಕುಗಳಿಗಾಗಿ ಜನಜಾಗೃತಿ ಸಭೆಗಳ ಮೂಲಕ ಮುಂದೆಯೂ ಸದಾ ಮುಂಚೂಣಿಯಲ್ಲಿ ನಿಂತು ಪ್ರಾಮಾಣಿಕ ಹೋರಾಟ ಮುಂದುವರಿಸುತ್ತೇನೆ,” ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಬಸವರಾಜ ಇಟಗಿ, ಆಂಜನೇಯ, ನಾಗಪ್ಪ, ಪವನ್, ವಿಶ್ವನಾಥ್, ರಾಜು, ಮರೆಪ್ಪ, ಬಸವರಾಜ, ದೇವಮ್ಮ, ರಫೀಕ್ ಪಟೇಲ್, ಬಸವರಾಜ, ಗಂಗಣ್ಣ, ಸಾಬಣ್ಣ, ಶರಣಪ್ಪ, ಜಗ್ಗೇಶ್, ಪ್ರಭು, ಮಲ್ಲೇಶ್, ಭೀಮರಾಯ, ಜಗ್ಗು, ಕಾಶಪ್ಪ, ಮರೆಪ್ಪ, ಚಂದಪ್ಪ, ಸಾಬಣ್ಣ, ಬಸವರಾಜ ಪಾಣಿ, ಸೂರ್ಯಕಾಂತ್, ನಾಗಮ್ಮ, ನಿಂಗಮ್ಮ, ಕಾಶಮ್ಮ, ದೇವೇಂದ್ರಮ್ಮ, ಮಲ್ಲಮ್ಮ, ಚಂದಮ್ಮ, ಭೀಮವ್ವ, ಗಂಗಮ್ಮ, ತಾಯಮ್ಮ, ಈರಮ್ಮ, ಖಾಸಿಂ, ಖತಲ್ ಸಾಬ್, ರಫೀಕ್, ನಬೀಲಾಲ್ ಫಕೀರ್, ಹಣಮಂತ ಸೇರಿದಂತೆ ನೂರಾರು ಅಭಿಮಾನಿಗಳು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku