
ಸುದ್ದಿ ಬೆಳಕು ವಾರ್ತೆ
ಕಲಬುರಗಿ : ದೇಶದ ಪ್ರತಿಷ್ಠಿತ ಸಾರಿಗೆ ಸಂಸ್ಥೆಯಾದ ವಿಜಯಾನಂದ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ (ವಿಟಿಪಿಎಲ್) ಏಷ್ಯಾದ ಸಾರಿಗೆ ವಲಯದಲ್ಲೇ ನೂತನ ಮೈಲಿಗಲ್ಲು ಸ್ಥಾಪಿಸಿದೆ. ವೋಲ್ವೋ ಇಂಡಿಯಾ ಸಂಸ್ಥೆಯೊAದಿಗೆ ಮಾಡಿಕೊಂಡ ಬೃಹತ್ ಒಪ್ಪಂದದ ಭಾಗವಾಗಿ, ಒಂದೇ ಆರ್ಡರ್‌ನಲ್ಲಿ ಖರೀದಿಸಲಾದ 150 ವೋಲ್ವೋ-9600 ಐಷಾರಾಮಿ ಸ್ಲೀಪರ್ ಕೋಚ್ ಗೋಲ್ಡ್ ಕ್ಲಾಸ್ ಬಸ್‌ಗಳನ್ನು ವಿಜಯಾನಂದ ಟ್ರಾವೆಲ್ಸ್ಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಖಾಸಗಿ ಸಾರಿಗೆ ಆಪರೇಟರ್ ಸಂಸ್ಥೆಯೊದು ಏಕಕಾಲಕ್ಕೆ ಇಷ್ಟೊಂದು ಬೃಹತ್ ಪ್ರಮಾಣದ ವೋಲ್ವೋ ಬಸ್‌ಗಳನ್ನು ಖರೀದಿಸಿರುವುದು ಏಷ್ಯಾದಲ್ಲೇ ಮೊದಲ ಐತಿಹಾಸಿಕ ದಾಖಲೆಯಾಗಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ, ವೋಲ್ವೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಸಿಇಒ ಬಿ. ಶ್ರೀನಿವಾಸ್ ಅವರು ವಿಆರ್‌ಎಲ್ ಮೀಡಿಯಾ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಹಾಗೂ ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವಾ ಸಂಕೇಶ್ವರ ಅವರಿಗೆ ಪ್ರತಿಯೊಂದು ಬಸ್‌ಗಳ ಕೀಲಿಕೈಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ವಿಇ ಕಮರ್ಷಿಯಲ್ ವೆಹಿಕಲ್ಸ್ ಮುಖ್ಯ ವಾಣಿಜ್ಯ ಅಧಿಕಾರಿ ಎಸ್.ಎಸ್. ಗಿಲ್ ಹಾಗೂ ಇವಿಪಿ ಬಸ್ ವಿಭಾಗದ ಸುರೇಶ್ ಚೆಟ್ಟಿಯಾರ್ ಉಪಸ್ಥಿತರಿದ್ದರು.
ಪ್ರಯಾಣಿಕರ ಸಮಯ ಉಳಿತಾಯಕ್ಕೆ ಒತ್ತು:
ಕೀಲಿಕೈ ಸ್ವೀಕರಿಸಿ ಮಾತನಾಡಿದ ಡಾ. ಆನಂದ ಸಂಕೇಶ್ವರ, “1996 ರಲ್ಲಿ ಆರಂಭವಾದ ವಿಜಯಾನಂದ ಟ್ರಾವೆಲ್ಸ್, 2007 ರಿಂದ ವೋಲ್ವೋ ಕಂಪನಿಯೊAದಿಗೆ ನಿರಂತರ ನಂಟು ಹೊಂದಿದೆ. ಆರಂಭದಲ್ಲಿ 20 ಬಸ್‌ಗಳನ್ನು ಖರೀದಿಸಲಾಗಿತ್ತು, 2012 ರಲ್ಲಿ 100 ಬಸ್‌ಗಳ ಆರ್ಡರ್ ನೀಡಲಾಗಿತ್ತು. ಇದೀಗ ಗ್ರಾಹಕರ ವಿಶ್ವಾಸಕ್ಕೆ ತಕ್ಕಂತೆ 150 ಅತ್ಯಾಧುನಿಕ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸುವಾಗಲೇ ಶೌಚಾಲಯ ವ್ಯವಸ್ಥೆ ಇದೆಯೇ ಎಂದು ವಿಚಾರಿಸುತ್ತಿದ್ದಾರೆ. ಈ ಬಸ್‌ಗಳಲ್ಲಿ ವಿಮಾನ ಮಾದರಿಯ ಅತ್ಯಾಧುನಿಕ ಶೌಚಾಲಯ ಇರುವುದರಿಂದ ನಡುವೆ ಬಸ್ ನಿಲ್ಲಿಸುವ ಅಗತ್ಯವಿರುವುದಿಲ್ಲ. ಇದರಿಂದ ಕನಿಷ್ಠ ಅರ್ಧ ಗಂಟೆಯ ಪ್ರಯಾಣದ ಸಮಯ ಉಳಿತಾಯವಾಗಿ, ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಮೊದಲೇ ಗಮ್ಯಸ್ಥಾನ ತಲುಪಲಿದ್ದಾರೆ,” ಎಂದು ತಿಳಿಸಿದರು.
ವೋಲ್ವೋ ನೆಕ್ಸ್ಟ್ ಲೆವೆಲ್ – ಹೊಸಕೋಟೆಯಲ್ಲೇ ಉತ್ಪಾದನೆ:
ವಿಜಯಾನಂದ ಟ್ರಾವೆಲ್ಸ್ ಎಂಡಿ ಶಿವಾ ಸಂಕೇಶ್ವರ ಮಾತನಾಡಿ, “ವೋಲ್ವೋ ಬಸ್‌ಗಳಿಗೆ ತನ್ನದೇ ಆದ ಭವ್ಯತೆ, ತಾಂತ್ರಿಕ ಪ್ರಬುದ್ಧತೆ ಮತ್ತು ಸುರಕ್ಷತೆ ಇದೆ. ಈ ಹಿಂದೆ ಸ್ವೀಡನ್‌ನಲ್ಲಿ ಉತ್ಪಾದನೆಯಾಗುತ್ತಿದ್ದ ಈ ವಿಶ್ವದರ್ಜೆಯ ಬಸ್‌ಗಳು ಈಗ ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಘಟಕದಲ್ಲೇ ತಯಾರಾಗುತ್ತಿರುವುದು ಹೆಮ್ಮೆಯ ಸಂಗತಿ,” ಎಂದರು.
ವೋಲ್ವೋ ಸಿಇಒ ಬಿ. ಶ್ರೀನಿವಾಸ್ ಮಾತನಾಡಿ, “ವಿಆರ್‌ಎಲ್ ನಮ್ಮ ದೀರ್ಘಕಾಲೀನ ಮತ್ತು ಮೌಲ್ಯಯುತ ಪಾಲುದಾರ. ಈ 150 ಬಸ್‌ಗಳ ಒಪ್ಪಂದವು ದಶಕಗಳಿಂದ ಪರಸ್ಪರ ಬೆಳೆದುಬಂದ ವಿಶ್ವಾಸಕ್ಕೆ ಹಿಡಿದ ಕನ್ನಡಿ,” ಎಂದು ಶ್ಲಾಘಿಸಿದರು.












Leave a Reply