
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರನ್ನು ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದನ್ನು ಮರುಪರಿಶೀಲಿಸಿ, ತಕ್ಷಣ ಪ್ರಶಸ್ತಿ ಆಯ್ಕೆಯನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಇಂದೂಧರ್ ಸಿನ್ನೂರ ಆಗ್ರಹಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಸಹಾಯಕ ಅಧಿಕಾರಿ ವಿಜಯೇಂದ್ರ ಹುಲಿನಾಯಕ ಅವರಿಗೆ ಸಲ್ಲಿಸಿ ಅವರು ಮಾತನಾಡಿದರು.
ಶಿವಾನಂದ ತಗಡೂರು ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 2026ರ ಮಾರ್ಚ್ 28ರಂದು ವಿವಿಧ ಐಪಿಸಿ ಕಲಂಗಳಡಿ ಎಫ್‌ಐಆರ್ ದಾಖಲಾಗಿದೆ. ಸಂಘದ ಹಣ ದುರುಪಯೋಗಪಡಿಸಿಕೊಂಡಿರುವ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧದ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ರಾಘವೇಂದ್ರ ಮಾಸ್ತರ ಒತ್ತಾಯಿಸಿದರು.
ಈಗಾಗಲೇ ಅವರನ್ನು ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಹಾಗೂ ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ಸಮಿತಿ ಸದಸ್ಯರಾಗಿ ನೇಮಕ ಮಾಡಲಾಗಿದೆ. ಹೀಗಾಗಿ ಅವರು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೆ ಮಾಧ್ಯಮ ಅಕಾಡೆಮಿ ಹಾಗೂ ಮಾಸಾಶನ ಸಮಿತಿ ಸದಸ್ಯತ್ವವನ್ನು ರದ್ದುಗೊಳಿಸಿ, ಆರೋಪಗಳ ಕುರಿತು ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರಕರಣದ ಸತ್ಯಾಸತ್ಯತೆ ಬಹಿರಂಗವಾಗುವವರೆಗೆ ಅವರಿಗೆ ಯಾವುದೇ ಗೌರವ ಪ್ರಶಸ್ತಿ ಅಥವಾ ಪ್ರಮುಖ ಜವಾಬ್ದಾರಿ ನೀಡದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ದಿನೇಶ ವಿಸಿ, ನಾಗಪ್ಪ ಮಾಲಿ ಪಾಟೀಲ್, ರುಪೇಶ ಹುಲೀಕರ್, ಪ್ರಸನ್ನ ದೇಶಮುಖ, ಸದಸ್ಯರಾದ ಶಂಕರ್ ನಾರಾಯಣ್ ಪಸ್ಪೂಲ, ಮಲ್ಲನಗೌಡ ಕಾಮರೆಡ್ಡಿ, ಅಬ್ದುಲ್ ಚಾವುಸ್, ರಾಘವೇಂದ್ರ ಮಾಸ್ತರ, ಮೌನೇಶ ಮಂಗಿಹಾಳ, ಮದನ ಲಾಲ್ ಕಟ್ಟಿಮನಿ, ಧರ್ಮರಾಜ ಸುಂಬಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.












Leave a Reply