ಯಾದಗಿರಿ ಬಂದ್‌ಗೆ ಜಯ ಕರ್ನಾಟಕ ಸಂಘಟನೆ ಬೆಂಬಲ ಇಲ್ಲ : ಬಿಎನ್‌ವಿ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಸರ್ವ ಸಂಘಟನೆಗಳ ಹೋರಾಟ ಸಮಿತಿ ಹೆಸರಿನಲ್ಲಿ ಸೆ.7 ರಂದು ನಡೆಸಲು ಉದ್ದೇಶಿತ ಬಂದ್ ಗೆ ನಮ್ಮ ಬೆಂಬಲ ಇಲ್ಲ ಮತ್ತು ನಮ್ಮ ಸಂಘಟನೆಯು ಇದರಲ್ಲಿ ಯಾವುದೇ ಪಾತ್ರ ಹೊಂದಿಲ್ಲ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಜಯ ಕರ್ನಾಟಕ ಸಂಘಟನೆ ಈಗಾಗಲೇ ರೈತರ ಪರವಾಗಿ ನಿರಂತರ ಹೋರಾಟ ಮಾಡುತ್ತಾ ಬರುತ್ತಿದೆ. ಮತ್ತು ರೈತರಿಗೆ ಎಕರೆಗೆ 50ಸಾವಿರ ಬರ ಪರಿಹಾರ ನೀಡಬೇಕು, ಮೋಡಬಿತ್ತನೆ ಮಾಡಬೇಕು ಎಂಬ ಬೇಡಿಕೆಗಳನ್ನು ಇಟ್ಟು ತಾಲ್ಲೂಕು ಹಂತದಲ್ಲಿಯೂ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ.
ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ರೂಪಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿಯೂ ಈ ಹೋರಾಟ ವಿಸ್ತರಣೆ ಮಾಡುವ ವಿಚಾರದಲ್ಲಿರುವುದರಿಂದ ನಮ್ಮ ಸಂಘಟನೆ ಈ ಹಿನ್ನೆಲೆಯಲ್ಲಿ ಚಿಂತನೆಯಲ್ಲಿ ನಿರತವಾಗಿದೆ.
ಈಗಾಗಲೇ ಮುಖ್ಯಮಂತ್ರಿಗಳು ಬರಗಾಲದ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿರುವುದರಿಂದ ಆ ಪಟ್ಟಿಯಲ್ಲಿ ಜಿಲ್ಲೆಯ ಇನ್ನುಳಿದ ತಾಲ್ಲೂಕುಗಳು ಸೇರ್ಪಡೆಯಾಗುವುದನ್ನು ಕಾದುನೋಡಿ ನಂತರ ಅಗತ್ಯ ಬಿದ್ದಲ್ಲಿ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಆದರೆ ತರಾತುರಿಯಲ್ಲಿ ಸರ್ವ ಸಂಘಟನೆಗಳ ಹೋರಾಟ ಸಮಿತಿ ಹೆಸರಿನಲ್ಲಿ ಬಂದ್ ನಡೆಸುತ್ತಿರುವುದಕ್ಕೆ ನಮ್ಮ ಸಂಘಟನೆಯ ಬೆಂಬಲ ಇರುವುದಿಲ್ಲ. ಜಿಲ್ಲೆಯಾದ್ಯಂತ ನಮ್ಮ ಸಂಘಟನೆಯ ಯಾವುದೇ ಘಟಕಗಳಿಂದಲೂ ಬೆಂಬಲವಿಲ್ಲ ಎಂದು ಅವರು ಹೇಳಿದ್ದಾರೆ.
ದಿಢೀರನೇ ಬಂದ್ ಮಾಡುವುದರಿಂದ ಜಿಲ್ಲೆಯ ಸಣ್ಣ ಪುಟ್ಟ ವ್ಯಾಪಾರಿಗಳಿಗೆ, ಬೀದಿಬದಿ ವರ್ತಕರಿಗೆ, ಶಾಲಾ ಕಾಲೇಜು ಮಕ್ಕಳಿಗೆ ಸೇರಿದಂತೆ ಜನಜೀವನಕ್ಕೆ ತೊಂದರೆಯಾಗುತ್ತದೆ. ಈ ಕಾರಣಕ್ಕೆ ಬಂದ್ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದು, ಸರ್ಕಾರದ ಮುಂದಿನ ನಡೆ ನೋಡಿಕೊಂಡು ಬೇರೆಯದೇ ರೀತಿಯಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.

You Might Also Like

Leave a Reply

Your email address will not be published. Required fields are marked *

Suddi Belaku