
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ, ಬೆಳೆ ನಷ್ಟದ ನಡುವೆಯೂ ಯಾದಗಿರಿ ಹಾಗೂ ಗುರುಮಠಕಲ್ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಶಾಸಕ ಶರಣಗೌಡ ಕಂದಕೂರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ನೀಡಿರುವ ವರದಿಗಳಲ್ಲಿಯೇ ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳಲ್ಲಿ ಮಳೆ ಕೊರತೆ ಹೆಚ್ಚಿರುವುದಾಗಿ ಉಲ್ಲೇಖಿಸಲಾಗಿದೆ. ಆದರೂ ಕೇವಲ ಒಂದು ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ಯಾವ ಮಾನದಂಡದ ಆಧಾರದಲ್ಲಿ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕುಎಂದು ಅವರು ಆಗ್ರಹಿಸಿದರು.ಯಾದಗಿರಿ ಜಿಲ್ಲೆಯಲ್ಲಿ ಆರು ತಾಲೂಕುಗಳಿವೆ. ಅದರಲ್ಲಿ ಒಂದು ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ಉಳಿದ ತಾಲೂಕುಗಳಲ್ಲಿಯೂ ರೈತರು ಸಂಕಷ್ಟದಲ್ಲಿದ್ದಾರೆ. ವಿಶೇಷವಾಗಿ ಯಾದಗಿರಿ, ಗುರುಮಠಕಲ್, ಶಹಾಪುರ ಹಾಗೂ ಸುರಪುರ ಭಾಗಗಳು ನೀರಾವರಿ ಸೌಲಭ್ಯ ಕಡಿಮೆ ಇರುವ ಪ್ರದೇಶಗಳಾಗಿದ್ದು, ಬಹುತೇಕ ರೈತರು ಮಳೆಯನ್ನೇ ಅವಲಂಬಿಸಿದ್ದಾರೆ ಎಂದರು.
ಜೂನ್ 1ರಿಂದ ಜುಲೈವರೆಗೆ ಸರ್ಕಾರದ ವರದಿಯ ಪ್ರಕಾರ ಗುರುಮಠಕಲ್ನಲ್ಲಿ ಶೇ.58 ಹಾಗೂ ಯಾದಗಿರಿಯಲ್ಲಿ ಶೇ.59 ಮಳೆ ಕೊರತೆ ದಾಖಲಾಗಿದೆ. ಆಗಸ್ಟ್ 28ರವರೆಗಿನ ವರದಿಯಲ್ಲಿಯೂ ಗುರುಮಠಕಲ್ನಲ್ಲಿ ಶೇ.44, ಯಾದಗಿರಿಯಲ್ಲಿ ಶೇ.54, ಶಹಾಪುರದಲ್ಲಿ ಶೇ.50 ಹಾಗೂ ಸುರಪುರದಲ್ಲಿ ಶೇ.35 ಮಳೆ ಕೊರತೆ ಇದೆ” ಎಂದು ಹೇಳಿದರು.
ಈ ಅಂಕಿ-ಅಂಶಗಳು ನನ್ನ ವೈಯಕ್ತಿಕ ವರದಿಗಳಲ್ಲ. ಸರ್ಕಾರದ ಇಲಾಖೆಗಳೇ ನೀಡಿರುವ ವರದಿಗಳು. ಹಾಗಿದ್ದರೂ ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸದಿರುವುದಕ್ಕೆ ಕಾರಣವೇನು? ಎಂದು ಪ್ರಶ್ನಿಸಿದರು.
ಐದು ದಿನದ ಮಳೆಗೆ ಬರದ ಲೆಕ್ಕ ಬದಲಾಯಿಸಬೇಡಿ
ಆಗಸ್ಟ್ ಮೊದಲ ವಾರದಲ್ಲಿ ನಾಲ್ಕೈದು ದಿನ ಮಳೆಯಾಗಿದೆ. ಅದನ್ನೇ ಪರಿಗಣಿಸಿ ಬರ ಪರಿಸ್ಥಿತಿ ಇಲ್ಲ ಎಂದು ತೀರ್ಮಾನಿಸಿದರೆ ಅದು ರೈತರಿಗೆ ಮರಣ ಶಾಸನ ಬರೆದಂತಾಗುತ್ತದೆ. ನಾಲ್ಕೈದು ದಿನದ ಮಳೆಯಿಂದ ಇಡೀ ಹಂಗಾಮಿನಲ್ಲಿ ಆಗಿರುವ ನಷ್ಟ ಸರಿಯಾಗುವುದಿಲ್ಲ ಎಂದು ಕಂದಕೂರ ಹೇಳಿದರು.
ತೊಗರಿ, ಹತ್ತಿ, ಸೂರ್ಯಕಾಂತಿ ಸೇರಿದಂತೆ ಪ್ರಮುಖ ಬೆಳೆಗಳು ಮಳೆ ಕೊರತೆಯಿಂದ ಹಾನಿಗೊಳಗಾಗಿವೆ. ರೈತರು ಎರಡು-ಮೂರು ಬಾರಿ ಬಿತ್ತನೆ ಮಾಡಿ ಮತ್ತೆ ಬೆಳೆ ಕಳೆದುಕೊಂಡಿದ್ದಾರೆ. ಹೊಲಗಳಲ್ಲಿ ಬೆಳೆ ಕಾಣದ ಸ್ಥಿತಿ ಇದೆ ಎಂದರು.
ಜ್ವರ ಬಂದದ್ದು ಎಮ್ಮಿಗೆ ಬರೆ ಹಾಕಿದ್ದು ಎತ್ತಿಗೆ
ಬರ ಘೋಷಣೆ ವಿಚಾರದಲ್ಲಿ ಸರ್ಕಾರದ ಕ್ರಮವನ್ನು ವ್ಯಂಗ್ಯವಾಗಿ ಟೀಕಿಸಿದ ಅವರು, “ಜ್ವರ ಬಂದದ್ದು ಎಮ್ಮಿಗೆ, ಬರೆ ಹಾಕಿದ್ದು ಎತ್ತಿಗೆ ಎಂಬಂತಾಗಿದೆ. ಸಂಕಷ್ಟದಲ್ಲಿರುವ ತಾಲೂಕುಗಳನ್ನು ಬಿಟ್ಟು ಬೇರೆ ರೀತಿಯಲ್ಲಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ” ಎಂದು ಹೇಳಿದರು.
ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಾಸ್ತವ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಬೆಳೆ ನಷ್ಟ, ಮಳೆ ಕೊರತೆ ಬಗ್ಗೆ ವರದಿ ನೀಡಿದ್ದಾರೆ. ಆದರೂ ಆ ವರದಿಗಳನ್ನು ಪರಿಗಣಿಸದಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದರು.
ವರದಿ ಬದಲಾದದ್ದು ಹೇಗೆ?
ಒಂದು ಹಂತದಲ್ಲಿ ಶೇ.58-59ರಷ್ಟು ಮಳೆ ಕೊರತೆ ಇದೆ ಎಂದು ಹೇಳಿ, ನಂತರದ ವರದಿಯಲ್ಲಿ ಬೇರೆ ಅಂಕಿ-ಅಂಶ ತೋರಿಸುವುದಾದರೆ ಅದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಯಾವ ಆಧಾರದ ಮೇಲೆ ಕೆಲವು ತಾಲೂಕುಗಳನ್ನು ಬರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು” ಎಂದು ಒತ್ತಾಯಿಸಿದರು.
ಕ್ಯಾಬಿನೆಟ್ ಮುಂದೆ ಹೋಗುವ ವೇಳೆಗೆ ಅಧಿಕಾರಿಗಳ ವರದಿಯಲ್ಲಿ ಬದಲಾವಣೆ ಆಗಿದೆಯೇ? ಅಥವಾ ಬೇರೆ ಮಾನದಂಡಗಳನ್ನು ಬಳಸಲಾಗಿದೆಯೇ ಎಂಬುದು ತಿಳಿಯಬೇಕು ಎಂದರು.
ಗುಳೆ ತಪ್ಪಿಸಲು ಬರ ಘೋಷಣೆ ಅಗತ್ಯ
ನನ್ನ ಕ್ಷೇತ್ರದಲ್ಲಿ ದೊಡ್ಡ ಜಮೀನು ಹೊಂದಿರುವ ರೈತರಿಗಿಂತ ಒಂದು-ಎರಡು ಎಕರೆ ಜಮೀನು ಹೊಂದಿರುವ ಸಣ್ಣ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಳೆ ಬಂದು ಬೆಳೆ ಬಂದರೆ ಮಾತ್ರ ಅವರ ಕುಟುಂಬ ನಡೆಯುತ್ತದೆ. ಬೆಳೆ ಕೈಕೊಟ್ಟರೆ ಜೀವನಕ್ಕಾಗಿ ಗುಳೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ” ಎಂದು ಹೇಳಿದರು.ಗುರುಮಠಕಲ್ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುಳೆ ಹೋಗುವ ಪರಿಸ್ಥಿತಿ ಇದೆ. ಇದನ್ನು ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ರೈತರಿಗಾಗಿ ವಿಧಾನಸಭೆ ಎದುರು ಹೋರಾಟ
ಸರ್ಕಾರ ಎರಡನೇ ಪಟ್ಟಿಯಲ್ಲಿ ಯಾದಗಿರಿ ಹಾಗೂ ಗುರುಮಠಕಲ್ ತಾಲೂಕುಗಳನ್ನು ಸೇರಿಸುವುದಾಗಿ ಹೇಳಿದೆ. ಸರ್ಕಾರ ಮಾತಿನಂತೆ ನಡೆದುಕೊಳ್ಳಬೇಕು. ಸೇರಿಸದಿದ್ದರೆ ನನ್ನ ಕ್ಷೇತ್ರದ ರೈತರ ಪರವಾಗಿ ವಿಧಾನಸಭೆ ಎದುರು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.ನಾನು ವೈಯಕ್ತಿಕ ಅನುದಾನ ಅಥವಾ ಬೇರೆ ಯಾವುದೇ ಬೇಡಿಕೆ ಕೇಳುತ್ತಿಲ್ಲ. ರೈತರ ಬದುಕು ಉಳಿಸುವಂತೆ ಕೇಳುತ್ತಿದ್ದೇನೆ. ರೈತರು ಎಲ್ಲ ತಾಲೂಕುಗಳಲ್ಲಿಯೂ ಒಂದೇ ರೀತಿಯ ಸಂಕಷ್ಟದಲ್ಲಿದ್ದಾರೆ ಎಂದರು.
ರೈತರ ಆತ್ಮಹತ್ಯೆ ಬಗ್ಗೆ ಕಳವಳ
ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ರೈತರು ಕೌಟುಂಬಿಕ ಹಾಗೂ ಆರ್ಥಿಕ ಸಂಕಷ್ಟದಿಂದ ಇಂತಹ ಕಠಿಣ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಸಾಲದ ಹೊರೆ, ಬೆಳೆ ನಷ್ಟ, ಆದಾಯದ ಕೊರತೆ ಅವರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದರು.ರೈತರ ಸಮಸ್ಯೆಯನ್ನು ಕೇವಲ ಅಂಕಿ-ಅಂಶಗಳ ಮೂಲಕ ನೋಡದೆ ಮಾನವೀಯ ದೃಷ್ಟಿಯಿಂದ ಸರ್ಕಾರ ಪರಿಗಣಿಸಬೇಕು. ಬ್ಯಾಂಕ್ ನೋಟಿಸ್ಗಳಿಂದ ರೈತರು (ಮತ್ತಷ್ಟು ಆತಂಕಕ್ಕೆ ಒಳಗಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಾಲಮನ್ನಾ ಕೇಳುತ್ತಿಲ್ಲ, ರೈತರ ಬದುಕು ಉಳಿಸಿ
ಈ ಸರ್ಕಾರದಿಂದ ಈಗಲೇ ಸಾಲಮನ್ನಾ ಮಾಡುವಂತೆ ನಾವು ಕೇಳುತ್ತಿಲ್ಲ. ಆದರೆ ಪ್ರಕೃತಿ ವಿಕೋಪದಿಂದ ಸಂಕಷ್ಟದಲ್ಲಿರುವ ರೈತರನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರಕ್ಕಿದೆ. ಕನಿಷ್ಠ ಬೆಳೆ ಪರಿಹಾರ, ಬರ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿದರು.
ರೈತರ ಬಗ್ಗೆ ಕಾಳಜಿ ಇರಬೇಕಾದರೆ ತಾಯಿ ಹೃದಯವಿರುವವರು ಸರ್ಕಾರದಲ್ಲಿ ಇರಬೇಕು.
ಮಾನವೀಯ ಮನಸ್ಸು ಇರಬೇಕು. ಸರ್ಕಾರ ಪಕ್ಷ-ರಾಜಕೀಯವನ್ನು ಬದಿಗಿಟ್ಟು ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.
ಇದು ಒಬ್ಬ ಶಾಸಕನ ಹೋರಾಟವಲ್ಲ
ರೈತರ ಸಮಸ್ಯೆ ಪರಿಹಾರಕ್ಕಾಗಿ ಹೋರಾಟ ನಡೆಸುವುದು ನನ್ನ ಕರ್ತವ್ಯ. ಇದು ಶರಣಗೌಡ ಕಂದಕೂರ ಅವರೊಬ್ಬರ ಹೋರಾಟವಲ್ಲ. ಸಂಕಷ್ಟದಲ್ಲಿರುವ ಸಾವಿರಾರು ರೈತರ ಧ್ವನಿ. ಸರ್ಕಾರ ಕೂಡಲೇ ಮರುಪರಿಶೀಲನೆ ಮಾಡಿ ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಬೇಕು ಎಂದು ಹೇಳಿದರು.












Leave a Reply