ಯಾದಗಿರಿ ಜಿಲ್ಲೆಯ ಬರ ಪರಿಸ್ಥಿತಿ ಸಚಿವರ ಕಣ್ಣಿಗೆ ಕಾಣಲಿಲ್ಲವೇ? ಮಾನದಂಡವೇನು?: ರಾಚನಗೌಡ ಮುದ್ನಾಳ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಿ ಹೋದರೂ, ವಾಸ್ತವ ಪರಿಸ್ಥಿತಿ ಅವರ ಕಣ್ಣಿಗೆ ಕಾಣಲಿಲ್ಲವೇ? ಅವರು ಸರ್ಕಾರಕ್ಕೆ ಯಾವ ವರದಿ ನೀಡಿದ್ದಾರೆ ಮತ್ತು ಯಾವ ಮಾನದಂಡದ ಆಧಾರದ ಮೇಲೆ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ ಎಂಬುದು ತಿಳಿಯುತ್ತಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಕರ್ನಾಟಕ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ರಾಚನಗೌಡ ಮುದ್ನಾಳ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಾದಗಿರಿ ಜಿಲ್ಲೆಯಾದ್ಯಂತ ಮಳೆ ಕೊರತೆ ಉಂಟಾಗಿದ್ದು, ಲಕ್ಷಾಂತರ ಎಕರೆ ಪ್ರದೇಶದಲ್ಲಿ ಹೆಸರು, ಉದ್ದು, ಹತ್ತಿ, ತೊಗರಿ ಬೆಳೆಗಳು ಒಣಗಿವೆ. ರೈತರು ಸಾಲ ಮಾಡಿ ಎರಡು ಬಾರಿ ಬಿತ್ತನೆ ಮಾಡಿದರೂ ಬೆಳೆ ಕೈಗೆ ಬಂದಿಲ್ಲ.
ಯಾದಗಿರಿ ವಿಧಾನಸಭಾ ಕ್ಷೇತ್ರದ ಚಟ್ಟಳ್ಳಿ ಗ್ರಾಮದಲ್ಲಿ ಸಾಲದ ಹೊರೆಯಿಂದ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾನುವಾರುಗಳಿಗೆ ಮೇವಿನ ಕೊರತೆ, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಯಾದಗಿರಿ ಮತ್ತು ವಡಗೇರಾ ಸೇರಿದಂತೆ ಜಿಲ್ಲೆಯ ಎಲ್ಲಾ ಆರು ತಾಲೂಕುಗಳಲ್ಲೂ ಬರದಂತಹ ಪರಿಸ್ಥಿತಿ ಇದ್ದರೂ, ಕೇವಲ ಒಂದೇ ತಾಲೂಕನ್ನು ಮಾತ್ರ ಬರ ಪೀಡಿತ ಎಂದು ಘೋಷಿಸಿರುವುದು ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಈ ನಡೆ ಸರಿಯಾದುದಲ್ಲ. ಬರ ಪರಿಸ್ಥಿತಿ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ಜಿಲ್ಲೆಯ ಶಾಸಕರು ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.
ಕೂಡಲೇ ಸರ್ಕಾರ ಮತ್ತೊಮ್ಮೆ ವೈಜ್ಞಾನಿಕ ಸಮೀಕ್ಷೆ ನಡೆಸಿ ಸಮಗ್ರ ಯಾದಗಿರಿ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ರೈತರಿಗೆ ಬೆಳೆ ಪರಿಹಾರ, ಬಿತ್ತನೆ ಬೀಜ, ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಮತ್ತು ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

You Might Also Like

Leave a Reply

Your email address will not be published. Required fields are marked *

Suddi Belaku