ಯಾದಗಿರಿಯ 4 ಕ್ಷೇತ್ರಗಳನ್ನೂ ಬರಪೀಡಿತ ಎಂದು ಘೋಷಿಸಿ: ಭೀಮುನಾಯಕ ಎಚ್ಚರಿಕೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಜಿಲ್ಲೆಯ ಶಹಾಪುರ ಕ್ಷೇತ್ರ ವೊಂದನ್ನೇ ಬರ ಪೀಡಿತ ಎಂದು ಘೋಷಣೆ ಮಾಡಿದ ಸರ್ಕಾರ ಯಾದಗಿರಿ ಜಿಲ್ಲೆಯ ಇನ್ನುಳಿದ ಮೂರು ಕ್ಷೇತ್ರಗಳ ವ್ಯಾಪ್ತಿಯ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ, ಕೂಡಲೇ ಆಗಿರುವ ಅನ್ಯಾಯ ಸರಿಪಡಿಸಬೇಕು ಇಲ್ಲವಾದಲ್ಲಿ ಜಿಲ್ಲೆಗೆ ಭೇಟಿ ಕೊಡುವ ಸಚಿವರು, ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ ಎಂದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ ಎನ್ ಭೀಮುನಾಯಕ ಗುಡುಗಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ನೆರೆಯ ಕಲಬುರಗಿ ಜಿಲ್ಲೆಯನ್ನು ಸಂಪೂರ್ಣ ಬರ ಪೀಡಿತ ಎಂದು ಘೋಷಿಸಿದ ಸರ್ಕಾರ, ಯಾದಗಿರಿ ಜಿಲ್ಲೆಗೆ ಕೈ ಬಿಟ್ಟು ಕೇವಲ ಶಹಾಪೂರ ಕ್ಷೇತ್ರವನ್ನು ಬರ ಪೀಡಿತ ಎಂದು ಘೋಷಿಸಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬAತೆ ವರ್ತಿಸಿರುವುದು ಖಂಡನೀಯ ಸರ್ಕಾರದ ತಾರತಮ್ಯ ನೀತಿಯ ವಿರುದ್ಧ ಕರವೇ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಬರ ಪರಿಶೀಲನೆ ನಡೆಸಿ ವರದಿ ಕೊಟ್ಟಿದ್ದರೂ ಅದನ್ನು ಪರಿಗಣಸದೇ ಹೀಗೆ ಅನ್ಯಾಯ ಮಾಡಲಾಗಿದೆಯೇ ಎಂಬುದು ಸ್ಪಷ್ಟಪಡಿಸಬೇಕು ಸರಿಯಾಗಿ ವರದಿ ನೀಡಿದ್ದರೆ ಜಿಲ್ಲೆಯ ಇನ್ನುಳಿದ ಮೂರು ಕ್ಷೇತ್ರಗಳನ್ನು ಕೈಬಿಟ್ಟಿದ್ದೇಕೆ? ಇಲ್ಲವೇ ವರದಿ ಸರಿಯಾಗಿ ನೀಡಿಲ್ಲ ಎಂದರ್ಥವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಸಚಿವರೂ ಶಾಸಕರು ಅಧಿಕಾರಿಗಳು ಲೋಪ ಎಸಗಿದರೇ ಎಂದು ಪ್ರಶ್ನಿಸಿರುವ ಅವರು ಆಗಿರುವ ಅಚಾತುರ್ಯ ತಕ್ಷಣ ಸರಿಪಡಿಸಬೇಕು ಇಲ್ಲವಾದಲ್ಲಿ ಜಿಲ್ಲೆಗೆ ಬರುವ ಸಚಿವ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ ಎಂದು ಅವರು ಗುಡುಗಿದ್ದಾರೆ.

ಈ ಘೋರ ಅನ್ಯಾಯದ ವಿರುದ್ಧ ಕೂಡಲೇ ಜಿಲ್ಲೆಯ ಶಾಸಕರು, ಸಚಿವರು, ಸಂಸದರು ಇನ್ನುಳಿದ ಜನಪ್ರತಿನಿಧಿಗಳು ಈ ಅನ್ಯಾಯದ ವಿರುದ್ಧ ದನಿ ಎತ್ತಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈಗಾಗಲೇ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ರೈತರು ಎರಡೆರಡು ಸಾರಿ ಹೆಸರು, ಹತ್ತಿ ಮುಂತಾದ ಬೆಳೆಗಳನ್ನು ಬಿತ್ತಿ ಬರದ ಕಾರಣದಿಂದ ಮೊಳಕೆ ಬಾರದ ಬಂದರೂ ಒಣಗಿ ಹೋದ ಬೆಳೆಯನ್ನು ಹರಗಿ ಮತ್ತೆ ಮತ್ತೆ ಬಿತ್ತನೆ ಮಾಡಿರುವುದು ಅಧಿಕಾರಿಗಳಿಗೆ, ವರದಿ ಕೊಟ್ಟವರಿಗೆ ಕಾಣಲಿಲ್ಲವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದು, ಕೂಡಲೇ ಆಗಿರುವ ಅಚಾತುರ್ಯ ಸರಿಪಡಿಸಬೇಕು ಇಲ್ಲವಾದಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಭೀಮಾಶಂಕರ ಹತ್ತಿಕುಣಿ, ನಿಂಗಪ್ಪ ಗುಡಗುಡಿ, ಪ್ರಕಾಶ ಪಾಟೀಲ್ ಜೈಗ್ರಾಮ್, ವೆಂಕಟೇಶ ನಾಯಕ ಬೈರಿಮಡ್ಡಿ, ಅಬ್ದುಲ್ ಚಿಗಾನೂರ, ಶರಣಬಸಪ್ಪ ಯಲ್ಹೇರಿ, ಬಸವರಾಜ ಚೆನ್ನೂರ ಆಗ್ರಹಿಸಿದ್ದಾರೆ.

You Might Also Like

Leave a Reply

Your email address will not be published. Required fields are marked *

Suddi Belaku