
ಸುದ್ದಿ ಬೆಳಕು ವಾರ್ತೆ
ಶಹಾಪುರ : ಹೆಂಡತಿಯ ಮೇಲಿನ ಅತಿಯಾದ ಕೋಪ ಮತ್ತು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನಿಬ್ಬರು ಕಂದಮ್ಮಗಳನ್ನು ಕಾಲುವೆಯ ರಭಸದ ನೀರಿಗೆ ಎಸೆದು ಕೊಂದಿದ್ದ ಪಾಪಿ ತಂದೆ ಶಾಂತಪ್ಪ ಬಿರಾದಾರ್ನನ್ನು ಗೋಗಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ನೀರುಪಾಲಾಗಿದ್ದ ೯ ವರ್ಷದ ಸಾನ್ವಿ ಹಾಗೂ ೩ ವರ್ಷದ ಸೃಜನ್ ಮೃತದೇಹಗಳು ಬುಧವಾರ ಕಾಲುವೆಯಲ್ಲಿ ಪತ್ತೆಯಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.
ಮೂಲತಃ ತಾಲ್ಲೂಕಿನ ಕಕ್ಕಸಗೇರ ಗ್ರಾಮದ ನಿವಾಸಿಯಾದ ಶಾಂತಪ್ಪ, ತನ್ನ ಪತ್ನಿ ರೇಣುಕಾ ಅವರ ತವರೂರಾದ ಗಂಗನಾಳ ಗ್ರಾಮದಲ್ಲಿಯೇ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಮಂಗಳವಾರ ಮಧ್ಯಾಹ್ನ ದಂಪತಿ ನಡುವೆ ತೀವ್ರ ಜಗಳ ಉಂಟಾಗಿದ್ದು, ಕೋಪೋದ್ರಿಕ್ತನಾದ ಶಾಂತಪ್ಪ ಮಧ್ಯಾಹ್ನ ಸುಮಾರು ೨.೧೫ರ ವೇಳೆಗೆ ತನ್ನ ಮೂವರು ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಗೋಗಿ ಸಮೀಪದ ಕಾಲುವೆ ಬಳಿ ತೆರಳಿದ್ದಾನೆ. ಅಲ್ಲಿ ೯ ವರ್ಷದ ಸಾನ್ವಿ ಮತ್ತು ೩ ವರ್ಷದ ಸೃಜನ್ನನ್ನು ಕಾಲುವೆಗೆ ತಳ್ಳಿದ್ದಾನೆ. ಬಳಿಕ ಮತ್ತೋರ್ವ ಹೆಣ್ಣು ಮಗುವನ್ನು ವಾಪಸ್ ತಂದು ತಾಯಿಗೆ ಒಪ್ಪಿಸಿದ್ದಾನೆ.
ತಾನೇ ೧೧೨ಗೆ ಕರೆ ಮಾಡಿದ್ದ ಆರೋಪಿ:
ಕೃತ್ಯ ಎಸಗಿದ ಬಳಿಕ ಆರೋಪಿ ಶಾಂತಪ್ಪ ತಾನೇ ಸ್ವತಃ ೧೧೨ ತುರ್ತು ಸಹಾಯವಾಣಿಗೆ ಕರೆ ಮಾಡಿ ಮಕ್ಕಳನ್ನು ಕಾಲುವೆಗೆ ಎಸೆದಿರುವುದಾಗಿ ಮಾಹಿತಿ ನೀಡಿದ್ದ. ಮಾಹಿತಿ ಬೆನ್ನಲ್ಲೇ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಮಂಗಳವಾರ ರಾತ್ರಿ ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಬುಧವಾರ ಬೆಳಗ್ಗೆ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಕೆಬಿಜೆಎನ್ಎಲ್ ಅಧಿಕಾರಿಗಳ ಸಹಕಾರದೊಂದಿಗೆ ತೀವ್ರ ಶೋಧ ನಡೆಸಲಾಗಿದ್ದು, ಮಧ್ಯಾಹ್ನ ಸೃಜನ್ ಹಾಗೂ ಸಂಜೆ ಸಾನ್ವಿಯ ಮೃತದೇಹ ಪತ್ತೆಯಾಗಿದೆ.
ಕೊಲೆ ಪ್ರಕರಣ ದಾಖಲು:
“ಮಕ್ಕಳು ತಾಯಿ ರೇಣುಕಾ ಅವರೊಂದಿಗೆ ಹೆಚ್ಚು ಆತ್ಮೀಯರಾಗಿದ್ದರು ಹಾಗೂ ತನ್ನೊಂದಿಗೆ ಹೊಂದಾಣಿಕೆ ಇರಲಿಲ್ಲ ಎಂದು ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ. ಆತನ ಮಾನಸಿಕ ಸ್ಥಿತಿಯ ಕುರಿತೂ ತನಿಖೆ ನಡೆಸಲಾಗುತ್ತಿದೆ. ಆರಂಭದಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದ್ದು, ಇದೀಗ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ ೧೦೩ರ ಅಡಿ ಕೊಲೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ,” ಎಂದು ಎಸ್ಪಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.












Leave a Reply