ವಿಶ್ವಾರಾಧ್ಯರು ಜಗದ ಜನರನ್ನು ಉದ್ದರಿಸಿದ ಜಗಜಟ್ಟಿ: ಡಾ. ಗಂಗಾಧರ ಶ್ರೀ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ವಿಶ್ವಾರಾಧ್ಯರು ಅಣಿಮಾದಿ ಅಷ್ಟಸಿದ್ಧಿಗಳನ್ನು ಕಟ್ಟಿ ಮೆರೆದು ಜಗದ ಸಂಚಾರ ಮಾಡುತ್ತಾ ಜನರನ್ನು ಉದ್ಧರಿಸಿದ ಜಗಜಟ್ಟಿ ಅವರಾಗಿದ್ದರೆಂದು ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ನುಡಿದರು.
ಅಬ್ಬೆ ತುಮಕೂರಿನ ಶ್ರೀ ವಿಶ್ವಾರಾಧ್ಯರ ಸುಕ್ಷೇತ್ರದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಪರಂಪರಾ ಪಾದಯಾತ್ರೆಯ ಸಮಾರೋಪ ಹಾಗೂ ಅಮವಾಸ್ಯೆಯ ಶಿವಾನುಭವ ಗೋಷ್ಠಿಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗಂವ್ಹಾರದ ತೋಪಕಟ್ಟಿ ಹಿರೇಮಠದಲ್ಲಿ ಜನ್ಮ ತಾಳಿದ ವಿಶ್ವಾರಾಧ್ಯರು ಕಾಶೀಯಲ್ಲಿ ವ್ಯಾಸಂಗ ಪಡೆದು ಕಾಶೀ ಘನಪಂಡಿತರಾಗುತ್ತಾರೆ. ತಾವು ಸಂಪಾದಿಸಿದ ಜ್ಞಾನವನ್ನು ಈ ಲೋಕದ ಜನತೆಗೆ ಉಣ ಬಡಿಸಲು ಲೋಕ ಸಂಚಾರ ಮಾಡುತ್ತಾ ಜನರ ಕಾಳಿಕೆಯನ್ನು ಕಳೆದ ಪುಣ್ಯಾತ್ಮರೆಂದು ಹೇಳಿದರು.

ಮಾನವ ಜನ್ಮ ದೊಡ್ಡದು ಇದನ್ನು ಹಾಳು ಮಾಡಲಿಬೇಡ ಹುಚ್ಚಪ್ಪಗಳಿರಾ ಎಂಬ ದಾಸ ವಾಣಿಯಂತೆ ಮನುಷ್ಯರಾಗಿ ಹುಟ್ಟಿ ಬಂದ ಮೇಲೆ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುವ ರೀತಿಯಲ್ಲಿ ಬಾಳಿ ಬದುಕಬೇಕೆಂದು ಶ್ರೀ ವಿಶ್ವಾರಾಧ್ಯರು ಲೋಕದ ಜನತೆಗೆ ತಿಳಿ ಹೇಳುತ್ತಿದ್ದರೆಂದು ಹೇಳಿದರು.
ಜಾತಿ-ಮತ, ಪಂಥ-ಪಂಗಡಗಳನ್ನು ಮೀರಿ ಮಾನವತೆಯ ನೆಲೆಗಟ್ಟಿನಲ್ಲಿ ಎಲ್ಲರೂ ಸೌಹಾರ್ದಭಾವದಿಂದ ಬಾಳಿ ಬದುಕಬೇಕೆಂಬುದು ವಿಶ್ವಾರಾಧ್ಯರ ಆಶಯವಾಗಿತ್ತು. ಅಂತೆಯೇ ಇಂದಿಗೂ ಅಬ್ಬೆ ತುಮಕೂರಿನ ಮಠದಲ್ಲಿ ಜಾತ್ಯಾತೀತ ಭಾವವನ್ನು ಕಾಪಾಡಿಕೊಂಡು ಬಂದು ಸಕಲ ಜಿವಾತ್ಮರಿಗೆ ಲೇಸನೇ ಬಯಸಲಾಗುತ್ತಿದೆ ಎಂದು ಹೇಳಿದರು.
ಪಾದಯಾತ್ರೆ ಜಗದ ಮತ್ತು ಜನತೆಯ ಕಲ್ಯಾಣವನ್ನು ಬಯಸಿ ಪ್ರತಿ ವರ್ಷವು ಮಾಡಿಕೊಂಡು ಬರಲಾಗುತ್ತಿದೆ. ಈ ಸಲ ಪಾದಯಾತ್ರೆ ಸಂದರ್ಭದಲ್ಲಿ ಮಳೆ ಆಗುತ್ತಿರುವುದು ಈ ವರ್ಷದ ಸಮೃದ್ದಿಯ ಶುಭ ಸೂಚಕವೆಂದು ಹೇಳಿದರು.

ಮೂರು ದಿನಗಳ ಕಾಲ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಅತ್ಯಂತ ಭಕ್ತಿ-ಭಾವದಿಂದ ಪರಂಪರಾ ಪಾದ ಯಾತ್ರೆಯಲ್ಲಿ ಪಾಲ್ಗೊಂಡು ವಿಶ್ವಾರಾಧ್ಯರ ಕೃಪೆಗೆ ಪಾತ್ರರಾಗಿದ್ದೀರಿ. ವರ್ಷವಿಡೀ ಸದ್ಗುರುವಿನ ಆಶೀವಾರ್ದದಿಂದ ನಿಮ್ಮೆಲ್ಲರ ಬದುಕಿನಲ್ಲಿ ಸನ್ಮಂಗಳವುಂಟಾಗುತ್ತದೆಂದು ಶುಭ ಹಾರೈಸಿದರು.
ಪಾದಯಾತ್ರೆಯ ಸಂದರ್ಭದಲ್ಲಿ ವಿವಿಧ ಹಳ್ಳಿಗಳಲ್ಲಿ, ಮಾರ್ಗಮಧ್ಯದಲ್ಲಿ ವಿವಿಧ ದಾಸೋಹ ಸೇವೆ ಮಾಡಿದ ಭಕ್ತರಿಗೆ ಮತ್ತು ಪಾದಯಾತ್ರೆ ಸುಗಮವಾಗಿ ಸಾಗಲು ಸಹಕರಿಸಿದ ಪೋಲಿಸ್, ಆರೋಗ್ಯ, ಜೆಸ್ಕಾಂ ಮುಂತಾದ ಇಲಾಖೆಗಳ ಸೇವೆಯು ಕೂಡಾ ಸಾರ್ಥಕವಾಗಿ ಜರುಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ನಾಡಿನ ಹರ-ಗುರು ಚರಮೂರ್ತಿಗಳು, ರಾಜಕೀಯ ಮುಖಂಡರು, ಸಾಹಿತಿ ಕಲಾವಿದರು, ಸೇರಿದಂತೆ ಅನೇಕ ಭಕ್ತರು ಇದ್ದರು.
ಇದಕ್ಕೂ ಮುನ್ನ ಸಂಜೆ ಹೊತ್ತಿಗೆ ಪರಂಪರಾ ಪಾದಯಾತ್ರೆ ಅಬ್ಬೆ ತುಮಕೂರಿನ ಪಾದಗಟ್ಟೆಯನ್ನು ತಲುಪಿದ ಕೂಡಲೇ ಅಲ್ಲಿ ನೆರೆದ ಸಹಸ್ರಾರು ಭಕ್ತರು ಅತ್ಯಂತ ಸಡಗರ ಭಕ್ತಿಯಿಂದ ಪಾದ ಯಾತ್ರೆಯನ್ನು ಬರಮಾಡಿಕೊಂಡರು.
ಡೊಳ್ಳು, ಬಾಜಾ, ಭಜಂತ್ರಿ, ಮುಂತಾದ ಮಂಗಳ ವಾದ್ಯಗಳು, ಸುಮಂಗಲಿಯರ ಕಳಸ, ಕೋಲಾಟ, ನೂರಾರು ಭಜನಾ ಮೇಳಗಳು, ಪೌರಾಣಿಕ ವೇಷಧರಿಸಿದ ಪಾತ್ರಧಾರಿಗಳು, ರಂಗು ರಂಗಿನ ವಿದ್ಯುತ ದೀಪಗಳು ಪಾದಗಟ್ಟೆಯ ಆವರಣದಲ್ಲಿ ಭಕ್ತಿಯ ಮೆರಗನ್ನು ಹೆಚ್ಚಿಸಿದ್ದವು.

ಪರಂಪರಾ ಪಾದಯಾತ್ರೆ ಸಾಂಗೋಪಾಂಗವಾಗಿ ನೆರವೇರಿದ್ದಕ್ಕೆ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ಪಾದಗಟ್ಟೆಯಲ್ಲಿ ನಿಂತು ಭಕ್ತರಿಗೆ ಕೈ ಬೀಸಿದಾಗ ಅಲ್ಲಿ ನೆರೆದ ಭಕ್ತರ ಜಯಘೊಷ ಮುಗಿಲು ಮುಟ್ಟಿತು.

ಶಾಸಕ ಶರಣಗೌಡ ಕಂದಕೂರ, ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದರಾಮ ಮೇತ್ರೆ, ಮಾಜಿ ಶಾಸಕ ದೊಡ್ಡಪ್ಪ ಗೌಡ ನರಬೋಳ, ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮೂಡು, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲಣ್ಣಗೌಡ ಕೌಳೂರು, ವಿಶ್ವನಾಥ ಸಿರವಾಳ, ನರಸಣಗೌಡ ರಾಯಚೂರು, ಡಾ.ಸುಭಾಶ್ಚಂದ್ರ ಕೌಲಗಿ, ಚನ್ನಪ್ಪಗೌಡ ಮೋಸಂಬಿ, ಡಾ.ವೀರೇಶ ಜಾಕಾ, ಬಸ್ಸು ಗೌಡ ಬಿಳ್ಹಾರ, ಸೇರಿದಂತೆ ಅನೇಕ ಮುಖಂಡರು ಇದ್ದರು.

ಕೇರಳ, ರಾಜಮಂಡರಿ, ಹೈದ್ರಾಬಾದ, ಬೆಂಗಳೂರು ನಗರಗಳಿಂದ ಆಗಮಿಸಿದ್ದ 150ಕ್ಕೂ ಹೆಚ್ಚು ಕಲಾವಿದರಿಂದ ನಡೆದ ಪೌರಾಣಿಕ ವೇಷಭೂಷಣಗಳ ಪ್ರದರ್ಶನ ಮೆರವಣಿಗೆಯ ಆಕರ್ಷಣೆಯಾಗಿ ಜನ ಮನ ಸೂರೆಗೊಂಡಿತು.
ಶಿವಾನುಭವ ಗೋಷ್ಠಿಯ ತರುವಾಯ ಎಲ್ಲರೂ ಪ್ರಸಾದವನ್ನು ಸ್ವೀಕರಿಸಿ, ವಿಶ್ರಾಂತಿ ಪಡೆದ ಪಾದಯಾತ್ರಿಗಳು ಮರುದಿನ ಬೆಳಿಗ್ಗೆ ತಮ್ಮ ತಮ್ಮ ಊರುಗಳಿಗೆ ತೆರಳಿದರು.

Leave a Reply

Your email address will not be published. Required fields are marked *

Suddi Belaku