ಯಾದಗಿರಿ ರಸ್ತೆ, ಪಾದಚಾರಿ ಮಾರ್ಗ ಪರಿಶೀಲಿಸಿದ ಡಿಸಿ; ಒತ್ತುವರಿ ತೆರವಿಗೆ ಸೂಚನೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ನಗರದ ವಿವಿಧಡೆ ಬುಧವಾರ ಬೆಳಂಬೆಳಗ್ಗೆ ಮಿಂಚಿನ ಸಂಚಾರ ನಡೆಸಿರುವ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರು, ಇಲ್ಲಿನ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪರಿಶೀಲನೆ ಮಾಡಿದರು. ನಗರದ ಡಿಗ್ರಿ ಕಾಲೇಜಿನಿಂದ ಕನಕ ಸರ್ಕಲ್ ಹೋಗುವ ರಸ್ತೆಗೆ ತೆರಳಿದ ಅವರು, ರಸ್ತೆ, ಪಾದಚಾರಿ ಮಾರ್ಗ, ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.

ಒಳರಸ್ತೆ ಪರಿಶೀಲನೆ ನಡೆಸಿ, ರಸ್ತೆಯ ಅಗಲ ಹಾಗೂ ಸಂಚಾರಕ್ಕೆ ಅಡ್ಡಿಯಾಗುವ ಅಂಶಗಳನ್ನು ಕುರಿತು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ಅವರಿಂದ ಮಾಹಿತಿ ಪಡೆದು ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೇ ಸೂಚಿಸಿದರು.

ಪಾದಚಾರಿ ಮಾರ್ಗದ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಅಲ್ಲಿನ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಮತ್ತು
ರಸ್ತೆಯಲ್ಲಿ ಸಂಗ್ರಹಿಸಿರುವ ಎಲ್ಲಾ ನಿರ್ಮಾಣ ಸಾಮಗ್ರಿಗಳನ್ನು ತಕ್ಷಣ ತೆರವುಗೊಳಿಸುವಂತೆ ನಿರ್ದೇಶನ ನೀಡಿದರು.

ಯಾವುದೇ ಅಡೆತಡೆಗಳಿಲ್ಲದೆ ರಸ್ತೆ ತನ್ನ ಪೂರ್ಣ ಅಗಲದಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುವಂತೆ ವ್ಯವಸ್ಥೆ ಮಾಡಬೇಕೆಂದು ಡಿಸಿ ಹೇಳಿದರು.

ರಸ್ತೆಯ ಇಕ್ಕೆಲಗಳಲ್ಲಿ ಸಂಗ್ರಹವಾಗಿರುವ ಎಲ್ಲಾ ಕಸವನ್ನು ತೆರವುಗೊಳಿಸುವಂತೆ ಸೂಚಿಸಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ನಿಯಮಾನುಸಾರ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತರಕಾರಿ ಮಾರುಕಟ್ಟೆಯನ್ನು ಸ್ವಚ್ಛವಾಗಿ ಹಾಗೂ ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದ ಅವರು, ಚರಂಡಿಗಳಿಗೆ ಸ್ಲ್ಯಾಬ್‌ಗಳು ಇಲ್ಲದಿರುವ ಎಲ್ಲಾ ಸ್ಥಳಗಳನ್ನು ಗುರುತಿಸಿ, ಅಗತ್ಯ ಸ್ಲ್ಯಾಬ್‌ಗಳನ್ನು ಕೂಡಲೇ ಅಳವಡಿಸುವಂತೆ ಹೇಳಿದರು.

ರಸ್ತೆ ಮತ್ತು ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ನಿರ್ವಹಿಸಬೇಕು.

ರಸ್ತೆಯನ್ನು ನಿಯಮಿತವಾಗಿ ಗುಡಿಸಿ, ಸ್ಕ್ರಬ್ಬಿಂಗ್ ಮೂಲಕ ರಸ್ತೆಯ ಮೇಲಿರುವ ಕೊಳಕು ಮತ್ತು ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ರಸ್ತೆಯ ಬಿಟುಮಿನ್ ಪದರ ಸ್ಪಷ್ಟವಾಗಿ ಗೋಚರಿಸುವಂತೆ ಸ್ವಚ್ಛತೆ ಕಾಪಾಡುವಂತೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಆಲಿಸಿ, ಅವುಗಳನ್ನು ದಾಖಲಿಸಿಕೊಂಡರು. ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ. ಸೇರಿದಂತೆಯೇ ಇತರರಿದ್ದರು.


ಜವಾಹರ್ ಕಾಲೇಜಿನ ಪಕ್ಕದಲ್ಲಿರುವ ಮಹಾತ್ಮ ಗಾಂಧಿ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉದ್ಯಾನವನವನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ, ಸಾರ್ವಜನಿಕರ ಬಳಕೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *

Suddi Belaku