ಮಳೆಯ ಕೊರತೆ; ಪ್ರತಿಯೊಬ್ಬ ರೈತರೂ ಬೆಳೆ ವಿಮೆ ಮಾಡಿಸಿ: ಸಚಿವರ ಸೂಚನೆ

Posted by

ಸುದ್ದಿ ಬೆಳಕು ವಾರ್ತೆ

ಶಹಾಪುರ: ಮಳೆಯ ಕೊರತೆಯಿಂದ ತಾಲೂಕಿನಾದ್ಯಂತ ಬೆಳೆಗಳು ಒಣಗುತ್ತಿದ್ದು, ಪ್ರತಿಯೊಬ್ಬ ರೈತರೂ ಕೂಡಲೇ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಕರೆ ನೀಡಿದರು.

ತಾಲೂಕಿನ ಮುಡಬೂಳ ಗ್ರಾಮದ ಹೊಲಗಳಿಗೆ ಗುರುವಾರ ಬೆಳಗ್ಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,
ಬೆಳೆ ವಿಮೆ ನೋಂದಣಿಗೆ ಆಗಸ್ಟ್ 10 ಕೊನೆಯ ದಿನವಾಗಿರುವುದರಿಂದ ಪ್ರತಿ ಗ್ರಾಮದಲ್ಲೂ ಡಂಗುರ ಸಾರಿ ರೈತರಿಗೆ ಮಾಹಿತಿ ನೀಡುವಂತೆ ತಾಲೂಕು ಪಂಚಾಯಿತಿ ಇಒ ಹಾಗೂ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಳೆಯ ಅಭಾವದಿಂದ ಉಂಟಾಗಿರುವ ಬೆಳೆ ಹಾನಿಯ ಸಮಗ್ರ ವರದಿಯನ್ನು ತಕ್ಷಣ ಸಿದ್ಧಪಡಿಸಿ ಕಂದಾಯ ಇಲಾಖೆಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಕಳೆದ ವರ್ಷ ಕೇವಲ 1,700 ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದರೆ, ಈ ಬಾರಿ ಈಗಾಗಲೇ ಸುಮಾರು 10 ಸಾವಿರ ರೈತರು ವಿಮೆ ಮಾಡಿಸಿರುವ ಮಾಹಿತಿ ಕೃಷಿ ಇಲಾಖೆಯಿಂದ ಲಭ್ಯವಾಗಿದೆ ಎಂದ ಅವರು, ಉಳಿದ ರೈತರೂ ವಿಳಂಬ ಮಾಡದೆ ವಿಮೆ ಮಾಡಿಸಿಕೊಳ್ಳುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ರಾಜ್ಯದ ಎಲ್ಲ ಜಿಲ್ಲೆಗಳ ಮಳೆ ಹಾಗೂ ಬೆಳೆ ಹಾನಿ ವರದಿಗಳನ್ನು ಪರಿಶೀಲಿಸಿದ ಬಳಿಕ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರ, ಪರಿಹಾರ ಘೋಷಣೆ ಕುರಿತು ಮುಖ್ಯಮಂತ್ರಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.

ರಸಗೊಬ್ಬರ ವಿತರಣೆಯಲ್ಲಿ ಅಕ್ರಮಗಳ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಟೋಕನ್ ವ್ಯವಸ್ಥೆಯ ಮೂಲಕವೇ ರಸಗೊಬ್ಬರ ವಿತರಣೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಕಠಿಣ ಕ್ರಮ: ಕಡೆಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಮೂವರ ಮೃತ ದುರ್ಘಟನೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸಲು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಜನರ ಜೀವಕ್ಕೆ ಅಪಾಯ ಉಂಟುಮಾಡುವಂತಹ ಪರಿಸ್ಥಿತಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೂ ಅಗತ್ಯ ನಿರ್ದೇಶನ ನೀಡಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮೃತ ಕುಟುಂಬಸ್ಥರಿಗೆ ಕಂಪನಿ ಹಾಗೂ ಸರಕಾರದ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಡ್ಯಾಂಗಳು ಭರ್ತಿಯಾಗಿದ್ದು ಕಾಲುವೆಗಳಿಗೆ ನೀರು ಹರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಹಳ ಪ್ರಮಾಣದಲ್ಲಿ ಬೆಳೆಗಳಿಗೆ ತೊಂದರೆಯಾಗುವುದಿಲ್ಲ ಎಂದರು.

ಅದ್ಧೂರಿ ಸ್ವಾಗತ
ಮುಡಬೂಳ ಗ್ರಾಮದ ಕ್ರಾಸ್ ಹತ್ತಿರ ಸಚಿವ ಶರಣಪ್ರಕಾಶ ಪಾಟೀಲ್ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ ಬೃಹತ್ ಪ್ರಮಾಣದ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ‌ ಮಾಜಿ ಸಚಿವ, ಶಾಸಕ ಶರಣಬಸಪ್ಪ ದರ್ಶನಾಪುರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾಂತಪ್ಪ ಸಾಹು, ಮುಖಂಡರಾದ ಸಂಗಣ್ಣಗೌಡ ಮಾಲಿಪಾಟೀಲ, ಅಶೋಕ್ ಮಲ್ಲಾಬಾದಿ, ಬಸವರಾಜ ಮುದ್ನೂರ, ಶಾಂತಗೌಡ ಮಾಲಿಪಾಟೀಲ್, ಮಲ್ಲನಗೌಡ ಮಾಲಿಪಾಟೀಲ್, ಬಸವಲಿಂಗಪ್ಪ ಹವಾಲ್ದಾರ್, ಬಸವರಾಜ ಹವಾಲ್ದಾರ್, ಕೃಷ್ಣಪ್ಪ ನಾಯ್ಕೊಡಿ, ಗುರುರಾಜ ಕುಲಕರ್ಣಿ, ಗುರಣ್ಣ ಬಡಕಲ್, ಚನ್ನಬಸಪ್ಪ, ಶ್ರೀಶೈಲಪ್ಪ ಸಾಹು, ಮಲ್ಲಿಕಾರ್ಜುನ ಹೂಸಳ್ಳಿ, ದ್ಯಾವಣ್ಣ ಕುನ್ನೂರು,‌ ಮೈಲಾರಿ ಪೂಜಾರಿ, ವೆಂಕಣ್ಣ ಯಾದವ್, ಹಣಮಂತ ಗಡಂಗ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ರೈತರು ಹಾಗೂ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


ಶಹಾಪುರ ತಾಲೂಕು ಬರಪೀಡಿತ ಎಂದು ಘೋಷಿಸಲು ಮನವಿ

ಶಹಾಪುರ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಪರಿಣಾಮ ಹತ್ತಿ, ತೊಗರಿ ಸೇರಿದಂತೆ ಮುಂಗಾರು ಬೆಳೆಗಳು ತೇವಾಂಶದ ಕೊರತೆಯಿಂದ ಬಾಡುತ್ತಿವೆ. ಹೀಗಾಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಮುಡಬೂಳ ಗ್ರಾಮದ ಅಶೋಕ ಮಲ್ಲಾಬಾದಿ ಮನವಿ ಸಲ್ಲಿಸಿದರು. ರೈತರು ಎಕರೆಗೆ ಸುಮಾರು ₹25 ಸಾವಿರ ವೆಚ್ಚ ಮಾಡಿದ್ದರೂ ಬೆಳೆ ಹಾನಿಗೀಡಾಗಿದ್ದು, ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಹಾಗೂ ರೈತರ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

Suddi Belaku