ಅಬ್ಬೆತುಮಕೂರು ಸಿದ್ಧಿ ಪುರುಷ ಶ್ರೀವಿಶ್ವಾರಾಧ್ಯರ ಪರಂಪರಾ ಪಾದಯಾತ್ರೆ 10 ರಿಂದ ಆರಂಭ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಸಿದ್ದಿ ಪುರುಷ ಶ್ರೀ ವಿಶ್ವಾರಾಧ್ಯರ ಜನ್ಮಕ್ಷೇತ್ರ ಗಂವ್ಹಾರದಿಂದ ಅಬ್ಬೆತುಮಕೂರಿಗೆ ಪ್ರತಿವರ್ಷದ ಪದ್ದತಿಯಂತೆ ಅಬ್ಬೆತುಮಕೂರು ಡಾ.ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪರಂಪರಾ ಪಾದಯಾತ್ರೆ ಆ.10 ರಿಂದ ಪ್ರಾರಂಭಗೊಳ್ಳಲಿದೆ ಎಂದು ಶ್ರೀಮಠದ ಕಾರ್ಯದರ್ಶಿ ಮಹೇಶ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ-10 ರಂದು ಸೋಮವಾರ ಬೆಳಗ್ಗೆ ಗಂವ್ಹಾರದ ಪೀಠಾಧೀಶ ಕಾಶೀಪೀಠದ 65ನೇ ಜಗದ್ಗುರು ಬನ್ನಿಬಸವೇಶ್ವರರ ಕರ್ತೃ ಗದ್ದುಗೆಗೆ ಮಹಾಪೂಜೆ ನೆರವೇರಿಸಲಾಗುವುದು. ಅಲ್ಲಿ ಬಿ.ಎಂ ಪಾಟೀಲ ಅವರಿಂದ ಪ್ರಸಾದ ವ್ಯವಸ್ಥೆ ಜರುಗುವುದು. ನಂತರ ಮಧ್ಯಾಹ್ನ 1 ಗಂಟೆಗೆ ಸಕಲ ಮಂಗಲ ವಾದ್ಯಗಳೊಂದಿಗೆ ಅಮೃತೇಶ್ವರ ಮಂದಿರದಿಂದ ಪೂಜ್ಯರ ದರ್ಶನ, ಪ್ರಸಾದ ಪಡೆದುಕೊಂಡು ವಿಶ್ವಾರಾಧ್ಯರ ಜನ್ಮಭೂಮಿ ಪಂಚಗೃಹ ತೋಪಕಟ್ಟಿ ಹಿರೇಮಠದಿಂದ ಭಕ್ತಗಣಪುರದ ಜನರ ಕಳಸ, ಕನ್ನಡಿಯೊಂದಿಗೆ ಪಾದಯಾತ್ರೆ ಸಾಗುವುದು.

ಅಲ್ಲಿಂದ ಮುಂದೆ ಹೊರಡುವ ಪಾದಯಾತ್ರೆ ಗ್ರಾಮದ ಸೀಮಾಂತರದಲ್ಲಿ ಊರಿನ ಚನ್ನಪ್ಪ ಸಾಹು ಬಿರಾದಾರ ಇವರ ಹೊಲದಲ್ಲಿ ನಿರ್ಮಿಸಿದ ಗುರು ಮಂಟಪದಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರುವುದು. ಅಲ್ಲಿ ಎಲ್ಲ ಭಕ್ತಗಣ ಪ್ರಸಾದ ಸ್ವೀಕರಿಸಿ ಮುಂದೆ ಹೊರಡುವ ಪಾದಯಾತ್ರೆ ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ಅನೇಕ ಭಕ್ತರ ವಿಶ್ರಾಂತಿ ಕಟ್ಟೆಯಲ್ಲಿ ಪಾದಪೂಜೆಯನ್ನು ಮುಗಿಸಿಕೊಂಡು ಅಣಬಿ ಗ್ರಾಮವನ್ನು ತಲುಪುವುದು.
ಅಣಬಿ ಗ್ರಾಮದ ಭಕ್ತರು ಪಾದಯಾತ್ರೆಯನ್ನು ಭಕ್ತಿಯಿಂದ ಬರಮಾಡಿಕೊಂಡು ಶ್ರೀಗಳ ಪಾದಪೂಜೆ ನೆರವೇರಿಸುವುರು. ಅಣಬಿ ಹಳ್ಳದ ದಂಡೆಯಲ್ಲಿ
ಚಿತ್ತಾಪುರದ ವಿಶ್ವಗಂಗಾ ಗೆಳೆಯರ ಬಳಗದಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಎಲ್ಲ ಪಾದಯಾತ್ರೆಗಳಿಗೆ ಶ್ರೀ ವಿಶ್ವಾರಾಧ್ಯರ ಶಾಖಾಮಠದಲ್ಲಿ ಪ್ರಸಾದ ನೆರವೇರುವುದು.
ಹಾಗೆ ಮುಂದೆ ಸಾಗುವ ಪಾದಯಾತ್ರೆ ಸಿರವಾಳ ಗ್ರಾಮವನ್ನು ತಲುಪಿದ ಮೇಲೆ ಆ ಗ್ರಾಮದ ಮಾಜಿ ಶಾಸಕರಾದ ಗುರುಪಾಟೀಲ ನೇತೃತ್ವದಲ್ಲಿ ಸಾಯಿಬಣ್ಣ ಶರಣರ ಹೊಲದಲ್ಲಿ ಪ್ರಸಾದ ಜರುಗುವುದು.
ಅಲ್ಲಿಂದ ಹೊರಟ ಪಾದಯಾತ್ರೆ ಹುರಸಗುಂಡಗಿ ಮುಖಾಂತರ ಅಲ್ಲಿನ ಭಕ್ತರ ಸೇವೆಯನ್ನು ಸ್ವೀಕರಿಸಿ ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನವನ್ನು ತಲುಪುವುದು. ಅಲ್ಲಿ ಶ್ರೀಗಳು ದೇವಿಗೆ ವಿಶೇಷ ಪೂಜೆಯನ್ನು ನೆರವೇರಿಸಿದ ನಂತರ ಎಲ್ಲರೂ ಪ್ರಸಾದ ಸ್ವೀಕರಿಸಿ ವಾಸ್ತವ್ಯ ಮಾಡುವರು.

ಆ.11 ರಂದು ಮಂಗಳವಾರ 2 ನೇ ದಿನದ ಪಾದಯಾತ್ರೆ ಕನಗಾನಹಳ್ಳಿ ಮಾರ್ಗವಾಗಿ ಹೊರಟು ಊಳವಂಡಗೇರಾ ಗ್ರಾಮದ ಭಕ್ತರಿಂದ ಪಾದಪೂಜೆ ಮತ್ತು ಪ್ರಸಾದ ವ್ಯವಸ್ಥೆ ನೆರವೇರುವುದು. ಅಲ್ಲಿಂದ ಮುಂದೆ ಸಾಗುವ ಪಾದಯಾತ್ರೆ ಬನ್ನೆಟ್ಟಿ ಗ್ರಾಮ ದಾಟಿದ ನಂತರ ಶ್ರೀವಿಶ್ವಾರಾಧ್ಯರ ದರ್ಶನ ಕಟ್ಟೆಯಲ್ಲಿ ಶಿವಲಿಂಗಪ್ಪ ಸಾಹು ಕೂಡಿ ಫರಹತಾಬಾದ್ ಹಾಗೂ ಅವರ ಬಳಗದವರು ಏರ್ಪಡಿಸುವ ಪ್ರಸಾದವನ್ನು ಎಲ್ಲ ಭಕ್ತರೊಂದಿಗೆ ಶ್ರೀಗಳು ಪ್ರಸಾದ ಸೇವನೆ ಮಾಡುವರು.

ಹಾಗೆ ಮುಂದೆ ಹೊರಡುವ ಪಾದಯಾತ್ರೆ ತಳಕ ಗ್ರಾಮದ ಗ್ರಾಮದೇವತೆ ಹಾಗೂ ವೀರಾಂಜನೇಯ ಸ್ವಾಮಿ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿ ತಳಕ ಗ್ರಾಮದ ಭಕ್ತರ ಪ್ರಸಾದ ಸ್ವೀಕರಿಸಿ ಹೆಡಗಿಮದ್ರಾ ಗ್ರಾಮ ತಲುಪುವರು ಮಲ್ಲರೆಡ್ಡಪ್ಪ ಸಾಹು ಅರಿಕೇರಿ ಅವರ ಮನೆಯಲ್ಲಿ ಪಾದಯಾತ್ರಿಗಳು ಫಲಹಾರ ಸ್ವೀಕರಿಸಿ ಹಾಗೆ ಮುಂದೆ ಸಾಗಿ ಭೀಮರೆಡ್ಡಿ ಸಾಹುಕಾರ ಅವರು ಏರ್ಪಡಿಸುವ ಪ್ರಸಾದವನ್ನು ಸ್ವೀಕರಿಸಿ ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿ ಮಠವನ್ನು ತಲುಪುವರು.

ಹೆಡಗಿಮದ್ರಾ ಮಠದಲ್ಲಿ ರಾತ್ರಿ ಇಡೀ ಭಜನೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಬಸವಂತಪೂರದ ಶಿವು ಸಾಹುಕಾರ ಅಲ್ಲಿ ಪ್ರಸಾದ ವ್ಯವಸ್ಥೆಯನ್ನು ಏರ್ಪಡಿಸುವರು.
ಆ.12 ರಂದು ಬುಧವಾರ ಅಮವಾಸ್ಯೆ ದಿವಸ 3ನೇ ದಿನದ ಪಾದಯಾತ್ರೆ ಅಮಾವಾಸ್ಯೆಯ ವಿಶೇಷ ಪೂಜಾ ವಿಧಾನಗಳನ್ನು ಪಲ್ಲಕ್ಕಿ ಮೂರ್ತಿ ಗಂಗಾಸ್ನಾನ ನೆರವೇರಿಸಿಕೊಂಡು ತರುವಾಯ ಹೋತಪೇಟೆಯ ಮಲ್ಲರೆಡ್ಡಿಗೌಡ, ಶಹಾಪೂರದ ಮರೆಪ್ಪ ಹೈಯ್ಯಾಳಕರ್ ಏರ್ಪಡಿಸುವ ಮಧ್ಯಾಹ್ನದ ಪ್ರಸಾದವನ್ನು ಸ್ವೀಕರಿಸಿ ಪಾದಯಾತ್ರೆಯು ಠಾಣಗುಂದಿ ತಲುಪುವುದು.

ಠಾಣಗುಂದಿ ಗ್ರಾಮದಲ್ಲಿ ಗ್ರಾಮಸ್ಥರು ಏರ್ಪಡಿಸಿದ ಪ್ರಸಾದ ಸ್ವೀಕರಿಸಿ ಸಂಜೆ ಅಬ್ಬೆತುಮಕೂರು ಶ್ರೀ ವಿಶ್ವಾರಾಧ್ಯರ ಪಾದಗಟ್ಟೆ ತಲುಪುವುದು. ಅಲ್ಲಿ ಅಲ್ಲಿಪೂರ ಗ್ರಾಮದ ಸದ್ಭಕ್ತರಿಂದ ಹಾಗೂ ಪಲ್ಲವಿ ಹೋಟೆಲ್ ಮಾಲಿಕರಿಂದ ಪ್ರಸಾದ ಫಲಹಾರದ ವ್ಯವಸ್ಥೆ ಜರುಗುವುದು.

ಸಂಜೆ 6ಗಂಟೆಗೆ ಸಮಸ್ತ ಭಕ್ತರು ನಾಡಿನ ವಿವಿಧ ಮಠಾಧೀಶರು, ಸಚಿವರು, ಶಾಸಕರುಗಳು, ರಾಜಕೀಯ ಮುಖಂಡರು, ಸಾಹಿತಿ, ಕಲಾವಿದರು ಪಾದಯಾತ್ರೆಯನ್ನು ಭಕ್ತಿ ಸಡಗರಗಳಿಂದ ಬರಮಾಡಿಕೊಂಡು ಪಾದಗಟ್ಟೆಯಿಂದ ಶ್ರೀ ವಿಶ್ವಾರಾಧ್ಯರ ದೇವಸ್ಥಾನದ ವರೆಗೆ ವಿಶೇಷ ಮೆರವಣಿಗೆಯಲ್ಲಿ ಕರೆದೊಯ್ಯುವರು.

ನಂತರ ಶ್ರೀಗಳು ಎಲ್ಲ ಭಕ್ತರಿಗೆ ದರ್ಶನ ನೀಡುವರು. ತರುವಾಯ ಮಾಸಿಕ ಅಮಾವಾಸ್ಯೆಯ ಶಿವಾನುಭವ ಗೋಷ್ಠಿ ಜರುವುದರೊಂದಿಗೆ ಪಾದಯಾತ್ರೆ ಸಂಪನ್ನಗೊಳ್ಳುವುದು.

ಕರ್ನಾಟಕ, ತೆಲಂಗಾಣ, ಆಂಧ್ರ, ಮಹಾರಾಷ್ಟ್ರಸೇರಿದಂತೆ ಲಕ್ಷಾಂತರ ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಶಾಂತಿ, ಸೌಹಾರ್ದತೆಯಿಂದ ನಡೆಯುವ ಭಕ್ತಿಯ ಈ ಪಾದಯಾತ್ರೆಯನ್ನು ಎಲ್ಲರೂ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಬೇಕು. ಪಾದಯಾತ್ರೆಯ ಸಂದರ್ಭದಲ್ಲಿ ಸಂಬಂಧ ಪಟ್ಟ ಇಲಾಖಾವಾರು ಆರಕ್ಷಕ ಸಿಬ್ಬಂದಿ, ಆರೋಗ್ಯ, ಜೆಸ್ಕಾಂ ಇಲಾಖೆ ಮುಂತಾದವರು ಪಾದಯಾತ್ರೆ ಸಾಂಗೋಪಾಂಗವಾಗಿ ನೆರವೇರಲು ಸಹಕರಿಸುವರು. ಸಮಸ್ತ ಭಕ್ತಾದಿಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ವಿಶ್ವಾರಾಧ್ಯರ ಕೃಪೆಗೆ ಪಾತ್ರರಾಗಲು ಮಹೇಶ ಸ್ವಾಮಿ ಕೋರಿದ್ದಾರೆ.

Leave a Reply

Your email address will not be published. Required fields are marked *

Suddi Belaku