
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಆಟೋ ವಾಹನಗಳ ಸಾಲ ಮರುಪಾವತಿ ವಿಚಾರದಲ್ಲಿ ಪೂರ್ವ ನೋಟಿಸ್ ನೀಡದೆ ವಾಹನಗಳನ್ನು ಜಪ್ತಿ ಮಾಡಿ ಹರಾಜು ಮಾಡಲಾಗುತ್ತಿದೆ ಹಾಗೂ ಚಾಲಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ, ಮಹೀಂದ್ರಾ ಫೈನಾನ್ಸ್ ಲಿಮಿಟೆಡ್, ಯಾದಗಿರಿ ಶಾಖೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಚಾಲಕರ ಒಕ್ಕೂಟ (ಆಟೋ ಘಟಕ) ವತಿಯಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ಆಟೋ ಚಾಲಕರಿಗೆ ಯಾವುದೇ ಪೂರ್ವ ನೋಟಿಸ್ ನೀಡದೇ ವಾಹನಗಳನ್ನು ಜಪ್ತಿ ಮಾಡುವುದು, ಮಾಲೀಕರ ಗಮನಕ್ಕೆ ತರದೆ ಹರಾಜು ನಡೆಸುವುದು ಹಾಗೂ ಸಿಬ್ಬಂದಿಯಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಸಾಲ ಮರುಪಾವತಿಯಲ್ಲಿ ವಿಳಂಬವಾದರೂ ಕಾನೂನುಬದ್ಧ ಹಾಗೂ ಮಾನವೀಯ ರೀತಿಯಲ್ಲಿ ನಡೆದುಕೊಳ್ಳಬೇಕೆಂದು ಒಕ್ಕೂಟ ಒತ್ತಾಯಿಸಿದೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ನಂತರ ಆಟೋ ಚಾಲಕರ ಆದಾಯ ಕುಸಿದಿದ್ದು, ಮಕ್ಕಳ ಶಿಕ್ಷಣ, ವಿಮೆ ಹಾಗೂ ಕುಟುಂಬ ನಿರ್ವಹಣೆಯ ಜೊತೆಗೆ ಸಾಲದ ಕಂತುಗಳನ್ನು ಪಾವತಿಸಲು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಏಕಾಏಕಿ ಜಪ್ತಿ ಮಾಡುವುದು ಬಡ ಆಟೋ ಚಾಲಕರ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮಹೀಂದ್ರಾ ಫೈನಾನ್ಸ್ ಯಾದಗಿರಿ ಶಾಖೆಯ ವ್ಯವಸ್ಥಾಪಕರು ಹಾಗೂ ಸಂಬಂಧಿತ ಸಿಬ್ಬಂದಿಯ ವಿರುದ್ಧ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಜಪ್ತಿ ಮಾಡಿರುವ ವಾಹನಗಳ ಪ್ರಕರಣಗಳನ್ನು ಮರುಪರಿಶೀಲಿಸಿ ಆಟೋ ಚಾಲಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಆಟೋ ಘಟಕದ ಗೌರವಾಧ್ಯಕ್ಷ ಸಂಗಪ್ಪ ಬೀರನಾಳ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ (ಸಾಂಗ್ಲಿಯಾನ), ಟ್ಯಾಕ್ಸಿ ವಾಹನ ಸಂಘದ ಜಿಲ್ಲಾಧ್ಯಕ್ಷ ಬಸುಗೌಡ ಚಟ್ನಳ್ಳಿ, ಉಪಾಧ್ಯಕ್ಷ ಮಂಜುನಾಥ ಪೂಜಾರಿ, ಖಜಾಂಚಿ ಮಹೇಶ ತೆಲಗೂರ, ಮಾರ್ಥಂಡಪ್ಪ ಹೊನಗೇರಾ, ಶಿವರಾಜ, ರಸೂಲಸಾಬ್ ಗಡ್ಡೆಸೂಗೂರ, ಮೆಹಬೂಬ್, ಮಲ್ಲಪ್ಪ ಬಂದಳ್ಳಿ ಸೇರಿದಂತೆ ಕರ್ನಾಟಕ ಚಾಲಕರ ಒಕ್ಕೂಟದ ಪದಾಧಿಕಾರಿಗಳು ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.











Leave a Reply