2014ರಲ್ಲಿ ನಡೆದಿದ್ದ ಬಸವೇಶ್ವರ ಜಾತ್ರೆಯ ಜಗಳ; 12 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯದ ಮಹತ್ವದ ತೀರ್ಪು; ನೊಂದ ಕುಟುಂಬಕ್ಕೆ ಪರಿಹಾರ.
ಸುದ್ದಿ ಬೆಳಕು ವಾರ್ತೆ
ಯಾದಗಿರಿ (ಶಹಾಪುರ) : ತಾಲೂಕಿನ ಸಾಗರ ಗ್ರಾಮದಲ್ಲಿ 2014ರಲ್ಲಿ ಜಾತ್ರಾ ಮಹೋತ್ಸವದ ವೇಳೆ ನಡೆದಿದ್ದ ಗಲಾಟೆ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ನಡೆಸಿದ ಶಹಾಪುರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, 20 ಮಂದಿ ಆರೋಪಿಗಳಿಗೆ 12 ವರ್ಷಗಳ ಕಠಿಣ ಕಾರಾವಾಸ ಹಾಗೂ ಒಟ್ಟು 4,25,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಘಟನೆಯ ಹಿನ್ನೆಲೆ:
ಸಾಗರ ಗ್ರಾಮದಲ್ಲಿ 15-01-2014 ಮತ್ತು 16-01-2014 ರಂದು ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಈ ವೇಳೆ ಬ್ಯಾನರ್ ಮತ್ತು ಫೋಟೋ ಹಾಕುವ ವಿಚಾರದಲ್ಲಿ ಗ್ರಾಮದ ಎರಡು ಗುಂಪುಗಳ ನಡುವೆ ವೈಷಮ್ಯ ಉಂಟಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ದಿನಾಂಕ 17-01-2014 ರಂದು ಬೆಳಿಗ್ಗೆ 9 ಗಂಟೆಗೆ ಹಳೆ ಪಂಚಾಯತಿ ಕಟ್ಟೆಯ ಹತ್ತಿರ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಏಕಾಏಕಿ ದಾಳಿ ನಡೆಸಿದ್ದರು. ಈ ಗುಂಪು ಘರ್ಷಣೆಯಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ದೇವೇಂದ್ರಪ್ಪ ಭೀಮಪ್ಪ ದಳಪತಿ ಎಂಬುವವರು ಮೃತಪಟ್ಟಿದ್ದರು.
ನ್ಯಾಯಾಲಯದ ವಿಚಾರಣೆ ಮತ್ತು ತೀರ್ಪು:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 68 ಮಂದಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿತ್ತು. ಈ ಪೈಕಿ 37 ಮಂದಿ ವಿಚಾರಣೆ ಎದುರಿಸಿದ್ದರು. ಸುದೀರ್ಘ 12 ವರ್ಷಗಳ ಕಾಲ ನಡೆದ ಕಾನೂನು ಹೋರಾಟದಲ್ಲಿ, ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ಮಾನ್ಯ ನ್ಯಾಯಾಧೀಶರಾದ ಶ್ರೀ ಮಹಾವೀರ ಎಂ.ಜೆ. ಅವರು 20 ಆರೋಪಿಗಳನ್ನು ದೋಷಿಗಳು ಎಂದು ತೀರ್ಮಾನಿಸಿದ್ದಾರೆ.
ದೋಷಿಗಳಿಗೆ ಐಪಿಸಿ ಸೆಕ್ಷನ್ 143, 147, 148, 307, 302, 114, 504, 149 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ 3(1)(2), 3(1)(X) ಅಡಿಯಲ್ಲಿ 12 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆಯನ್ನು ವಿಧಿಸಲಾಗಿದೆ. ಜೊತೆಗೆ ಒಟ್ಟು 4,25,000 ರೂ. ದಂಡ ವಿಧಿಸಲಾಗಿದ್ದು, ಇದರಲ್ಲಿ ಗಣನೀಯ ಮೊತ್ತವನ್ನು ಮೃತರ ವಾರಸುದಾರರಿಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ರವಿರಾಜ ಅವರು ವಾದ ಮಂಡಿಸಿದ್ದರು.












Leave a Reply