
ಸುದ್ದಿ ಬೆಳಕು ವಾರ್ತೆ
ಶಹಾಪುರ: ನಗರದ ಹಳೆಯ ತಹಸೀಲ್ ಕಚೇರಿ ಜಾಗದಲ್ಲಿಯೇ ಪ್ರಜಾಸೌಧ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಸಾಮೂಹಿಕ ಸಂಘಟನೆಗಳ ವತಿಯಿಂದ ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ನಗರದ ಹಳೆಯ ತಹಸೀಲ್ ಕಚೇರಿ ಇರುವ ಸರ್ವೆ ನಂ. 371ರಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಅಗತ್ಯವಿರುವಷ್ಟು ಸ್ಥಳವಿದೆ. ಅಲ್ಲಿಯೇ ಕಟ್ಟಡ ನಿರ್ಮಿಸಿದರೆ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ನಗರದಿಂದ ಸುಮಾರು 4–5 ಕಿ.ಮೀ ದೂರದಲ್ಲಿರುವ ಭೀಮರಾಯನಗುಡಿ ಸಮೀಪದ ಶಹಾಪುರ ಸೀಮೆಯ ಸರ್ವೆ ನಂ. 12/1ರಲ್ಲಿ ಪ್ರಜಾಸೌಧ ನಿರ್ಮಿಸಲು ಮುಂದಾಗಿರುವ ಕ್ರಮವನ್ನು ಸಾಮೂಹಿಕ ಸಂಘಟನೆಗಳು ವಿರೋಧಿಸುತ್ತಿವೆ ಎಂದು ಹೇಳಿದರು.
ಶಾಸಕರು ಈ ನಿರ್ಧಾರವನ್ನು ಮರುಪರಿಶೀಲಿಸಿ, ಹಳೆಯ ತಹಸೀಲ್ ಕಚೇರಿ ಜಾಗದಲ್ಲಿಯೇ ಪ್ರಜಾಸೌಧ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಳೆಯ ತಹಸೀಲ್ ಕಚೇರಿ ಜಾಗದ ಸಮೀಪದಲ್ಲೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಹೊಸ ಹಾಗೂ ಹಳೆ ಬಸ್ ನಿಲ್ದಾಣಗಳು, ವಸತಿ ಶಾಲೆಗಳು, ವಸತಿ ನಿಲಯಗಳು, ತರಕಾರಿ ಮಾರುಕಟ್ಟೆ ಹಾಗೂ ಎಪಿಎಂಸಿ ಸೇರಿದಂತೆ ವಿವಿಧ ಸಾರ್ವಜನಿಕ ಕಚೇರಿಗಳು ಮತ್ತು ಸೌಲಭ್ಯಗಳಿರುವುದರಿಂದ ಅಲ್ಲಿಯೇ ಪ್ರಜಾಸೌಧ ನಿರ್ಮಿಸಿದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರರಾದ ಮಾನಪ್ಪ ಗೋಗಿ, ಶಾಂತಪ್ಪ ಬಿ. ಸಾಲಿಮನಿ, ಹಣಮಂತ ಭಂಗಿ ಕೋಳ್ಳೂರು, ಶಿವಕುಮಾರ ಶಿರವಾಳ (ತಾಲ್ಲೂಕು ಅಧ್ಯಕ್ಷರು, ಶ್ರೀರಾಮ ಸೇನೆ), ಸೋಪಣ್ಣ ಹಳಿಸಗರ (ತಾಲ್ಲೂಕು ಅಧ್ಯಕ್ಷರು, ಜಯ ಕರ್ನಾಟಕ ಜನಪರ ವೇದಿಕೆ), ಅಂಬ್ರೇಶ್ ಎಂ. ಕಟ್ಟಿಮನಿ (ತಾಲ್ಲೂಕು ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ), ಕಾಶಪ್ಪ ಹಳಿಸಗರ (ತಾಲ್ಲೂಕು ಅಧ್ಯಕ್ಷರು, ಕಲ್ಯಾಣ ಕರ್ನಾಟಕ ಯುವ ಸೇನೆ), ಪ್ರದೀಪ ಅಣಬಿ (ಸಂಸ್ಥಾಪಕ ಅಧ್ಯಕ್ಷರು, ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘ), ರಮೇಶ ಗಾಂಜಿ, ಬಸವರಾಜ ರತ್ತಾಳ, ವೆಂಕಟೇಶ ನಾಯಕ ಆಲ್ದಾಳ, ಶರಣು ಖಾನಾಪುರ, ಅಂಬ್ರೇಶ್ ಶಹಾಪುರ, ಅಂಬ್ರೇಶ್ ಶಿರವಾಳ, ಭೋಜಪ್ಪ ಮುಂಡಾಸ, ಮಲ್ಲು ದೋರನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.











Leave a Reply