
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ನೇತೃತ್ವದ ನಿಯೋಗವು ಶನಿವಾರ ಕಲಬುರಗಿಯಲ್ಲಿ ಜೆಸ್ಕಾಂ ಅಧ್ಯಕ್ಷ ಪ್ರವೀಣಕುಮಾರ ಪಾಟೀಲ್ ಹರವಾಳ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಜಿಲ್ಲೆಯಲ್ಲಿ ಈ ಬಾರಿ ಮಳೆ ಸರಿಯಾಗಿ ಆಗದ ಕಾರಣ ಬೆಳೆಗಳು ಒಣಗುವ ಹಂತಕ್ಕೆ ಬಂದಿವೆ. ಅಂತರ್ಜಲದಲ್ಲಿ ನೀರು ಇದ್ದರೂ ಸಹ ಸರಿಯಾದ ಸಮಯಕ್ಕೆ ವಿದ್ಯುತ್ ದೊರೆಯದ ಕಾರಣ ರೈತರು ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಕಷ್ಟಪಟ್ಟು ಬಿತ್ತನೆ ಮಾಡಿದ ಬೆಳೆ ಕಣ್ಣೆದುರಿಗೇ ಒಣಗಿ ಹೋಗುತ್ತಿರುವುದನ್ನು ಕಂಡು ರೈತರು ಆತಂಕಗೊಂಡಿದ್ದಾರೆ ಎಂದು ಮುದ್ನಾಳ ಅವರು ಅಧ್ಯಕ್ಷರ ಗಮನಕ್ಕೆ ತಂದರು.
ಸರ್ಕಾರದ ನಿಯಮದಂತೆ ರೈತರಿಗೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡಬೇಕಾಗಿದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಕೇವಲ ಒಂದೆರಡು ಗಂಟೆಗಳ ಕಾಲ ಮಾತ್ರ ವಿದ್ಯುತ್ ನೀಡಿ ನಂತರ ಕಡಿತಗೊಳಿಸಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಅನಿರೀಕ್ಷಿತವಾಗಿ ಕರೆಂಟ್ ಬರುವುದು ಮತ್ತು ಹೋಗುವುದು ಪದೇ ಪದೇ ಆಗುತ್ತಿರುವುದರಿಂದ ಪಂಪ್‌ಸೆಟ್‌ಗಳು ಹಾಳಾಗುತ್ತಿವೆ. ಇದರಿಂದ ರೈತರು ಹೊಲದಲ್ಲೇ ರಾತ್ರಿಯಿಡೀ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಸಮಯ ನಿಗದಿಯಿಲ್ಲದೇ ಇರುವುದರಿಂದ ರೈತರಿಗೆ ಯಾವಾಗ ನೀರು ಹಾಯಿಸಬೇಕು ಎಂಬ ಗೊಂದಲ ಉಂಟಾಗಿದೆ ಎಂದು ಅವರು ವಿವರಿಸಿದರು.
ವಿಶೇಷವಾಗಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಭೀಮಾ ಮತ್ತು ಕೃಷ್ಣಾ ನದಿ ಪಾತ್ರದ ಗ್ರಾಮೀಣ ಪ್ರದೇಶದ ರೈತರು ಮತ್ತು ಕೊಳವೆಬಾವಿಗಳನ್ನು ಅವಲಂಬಿಸಿರುವ ರೈತರು ಈ ಸಮಸ್ಯೆಯಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ನದಿ ನೀರು ಇಲ್ಲದೇ ಸಂಪೂರ್ಣವಾಗಿ ಬೋರ್‌ವೆಲ್‌ಗಳನ್ನೇ ನಂಬಿರುವ ರೈತರಿಗೆ ವಿದ್ಯುತ್ ಇಲ್ಲದಿದ್ದರೆ ಬೆಳೆ ಉಳಿಸಿಕೊಳ್ಳುವುದು ಅಸಾಧ್ಯವಾಗಿದೆ. ಈಗಾಗಲೇ ಹಲವು ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದು, ಬೆಳೆ ಕೈಕೊಟ್ಟರೆ ಆರ್ಥಿಕವಾಗಿ ಸಂಪೂರ್ಣ ಹಾಳಾಗುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲೆಯ ಪಂಪ್‌ಸೆಟ್ ಅವಲಂಬಿತ ರೈತರಿಗೆ ನಿರಂತರ 7 ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮುದ್ನಾಳ ಅವರು ಮನವಿಯಲ್ಲಿ ಆಗ್ರಹಿಸಿದರು.
ರೈತರ ಸಂಕಷ್ಟವನ್ನು ಆಲಿಸಿದ ಜೆಸ್ಕಾಂ ಅಧ್ಯಕ್ಷ ಪ್ರವೀಣಕುಮಾರ ಪಾಟೀಲ್ ಅವರು, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮತ್ತು ಕೂಡಲೇ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸುರೇಶ ರಾಠೋಡ್, ಶಂಕರ ಸೋನಾರ, ವಿರುಪಾಕ್ಷಯ್ಯ ಸ್ವಾಮಿ, ಹಣಮಂತ ವಲ್ಲಾಪುರ, ಮಲ್ಲು ರಾಮಸಮುದ್ರ, ಶರಣಗೌಡ ಕಾಳಬೆಳಗುಂದಿ, ಅನೀಲ ಕರಾಟೆ, ಶಿವರಾಜ ದಾಸನಕೇರಿ, ವಕೀಲ ಶರಣಗೌಡ ಅಲಿಪುರ, ರಮೇಶ ಕೊಟೆಮನಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಮತ್ತು ರೈತರು ಉಪಸ್ಥಿತರಿದ್ದರು.











Leave a Reply