ಯಾದಗಿರಿ ಜಿಲ್ಲೆಯನ್ನು ‘ತೀವ್ರ ಬರಪೀಡಿತ’ ಎಂದು ಘೋಷಿಸಲು AIKKMS ಆಗ್ರಹ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಮಳೆ ಕೊರತೆಯಿಂದ ತತ್ತರಿಸಿರುವ ಯಾದಗಿರಿ ಜಿಲ್ಲೆಯನ್ನು ತಕ್ಷಣವೇ ‘ತೀವ್ರ ಬರಪೀಡಿತ’ ಎಂದು ಘೋಷಿಸಬೇಕು ಹಾಗೂ ಪ್ರತಿ ಎಕರೆಗೆ 50 ಸಾವಿರ ರೂ. ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (AIKKMS) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಈ ಕುರಿತು ಜುಲೈ 18ರಂದು ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿರುವ ಸಂಘಟನೆ, ಜಿಲ್ಲೆಯ ರೈತರು ಎದುರಿಸುತ್ತಿರುವ ಭೀಕರ ಪರಿಸ್ಥಿತಿಯನ್ನು ವಿವರಿಸಿದೆ.

ಬತ್ತಿದ ಕೆರೆಗಳು, ಒಣಗುತ್ತಿರುವ ಬೆಳೆ:

ಈ ವರ್ಷ ಜಿಲ್ಲೆಯಲ್ಲಿ ವಾಡಿಕೆಗಿಂತ ತುಂಬಾ ಕಡಿಮೆ ಮಳೆಯಾಗಿದ್ದು, ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ. ಕೆರೆ-ಕುಂಟೆಗಳು ಬತ್ತಿದ್ದು, ಬೋರ್‌ವೆಲ್‌ಗಳು ವಿಫಲವಾಗಿವೆ. ಅಲ್ಪಸ್ವಲ್ಪ ಮಳೆಯಾದಾಗ ಬಿತ್ತನೆ ಮಾಡಿದ್ದ ರೈತರ ಬೆಳೆಗಳು ಇದೀಗ ಮಳೆ ಇಲ್ಲದೆ ಹಾಗೂ ವಿಪರೀತ ಉಷ್ಣಾಂಶದಿಂದ ಒಣಗುತ್ತಿವೆ. ಇದರಿಂದ ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೆಚ್ಚುತ್ತಿರುವ ಗುಳೆ ಮತ್ತು ಆತ್ಮಹತ್ಯೆ:

ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಕೆಲಸವಿಲ್ಲದ ಕೃಷಿ ಕೂಲಿಕಾರ್ಮಿಕರು ಮತ್ತು ರೈತರು ಜೀವನೋಪಾಯಕ್ಕಾಗಿ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ಮತ್ತೊಂದೆಡೆ ಸಾಲಬಾಧೆ ತಾಳಲಾರದೆ ರೈತರು ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಷ್ಟಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿವೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಸಂಘಟನೆಯ ಪ್ರಮುಖ ಬೇಡಿಕೆಗಳು:

ಯಾದಗಿರಿಯ ಎಲ್ಲಾ ತಾಲೂಕುಗಳನ್ನು ತಕ್ಷಣವೇ ‘ತೀವ್ರ ಬರಪೀಡಿತ’ ಎಂದು ಘೋಷಿಸಬೇಕು.

ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ 200 ದಿನಗಳ ಕೆಲಸ ಹಾಗೂ ದಿನಕ್ಕೆ 600 ರೂ. ಕೂಲಿ ನೀಡಬೇಕು.

ರಾಷ್ಟ್ರೀಕೃತ, ಸಹಕಾರಿ ಹಾಗೂ ಖಾಸಗಿ ಬ್ಯಾಂಕ್ ಸೇರಿದಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಮತ್ತು ಸಾಲ ವಸೂಲಾತಿ ತಡೆಹಿಡಿಯಬೇಕು.

ಕೃಷ್ಣಾ, ಭೀಮಾ ನದಿಗಳಿಂದ ಹಾಗೂ ಮೇಲಿನ ಜಲಾಶಯಗಳಿಂದ ಕಾಲುವೆ ಮೂಲಕ ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು.

ಪ್ರತಿ ಎಕರೆಗೆ 50,000 ರೂ. ಬೆಳೆ ನಷ್ಟ ಪರಿಹಾರ ನೀಡಬೇಕು.

ಯಾದಗಿರಿ ಜಿಲ್ಲೆಗೆ ಮೋಡ ಬಿತ್ತನೆ ಕಾರ್ಯವನ್ನು ತಕ್ಷಣ ಪ್ರಾರಂಭಿಸಬೇಕು.

ಮನವಿ ಪತ್ರದಲ್ಲಿ AIKKMS ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಭೀಮರೆಡ್ಡಿ ಹಾಗೂ ಜಿಲ್ಲಾಧ್ಯಕ್ಷ ಶರಣಗೌಡ ಅವರು ಸಹಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Suddi Belaku